ದಿನೇದಿನೇ ಹೆಚ್ಚುತ್ತಿರುವ ಒತ್ತಡ, ಆತಂಕ, ಗೊಂದಲ ಮತ್ತು ಗುರಿಸ್ಪಷ್ಟತೆಯ ಕೊರತೆಯನ್ನು ಎದುರಿಸಲು ಯುವಜನತೆ ತಮ್ಮೊಳಗಿನ ಅಂತರAಗದ ಶಕ್ತಿಗಳನ್ನು ಹುಡುಕಬೇಕು. ಬದುಕು ನಮಗೆ ನೀಡುವ ಪ್ರತಿಯೊಂದು ಅನುಭವವೂ ಒಬ್ಬ ಶಿಕ್ಷಕ. ಜವಾಬ್ದಾರಿಗಳಿಂದ ವಿಮುಖರಾಗದೆ, ಸರಿಯಾದ ರೀತಿಯಲ್ಲಿ ಒತ್ತಡವನ್ನು ನಿರ್ವಹಿಸುವ ಕಲೆಯನ್ನು ರೂಢಿಸಿಕೊಳ್ಳಬೇಕೆಂದು ಕುಂದಾಪುರದ ಖ್ಯಾತ ವಕೀಲ ಹಾಗೂ ಹಿರಿಯ ಸಾಹಿತಿಗಳಾದ ಶ್ರೀ ಎ.ಎಸ್. ಎನ್. ಹೆಬ್ಬಾರ್ ಹೇಳಿದರು.
ಅವರು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಯುವಜನತೆಗೆ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮೊದಲನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ತಮ್ಮ ವಿಶಿಷ್ಟ ಹಾಸ್ಯ ಮಿಶ್ರಿತ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ಕೋರ್ಟಿನಲ್ಲಿ ಎದುರಿಸಿದ ಹಾಸ್ಯಭರಿತ ಹಾಗೂ ಅಚ್ಚರಿಯ ಘಟನೆಗಳನ್ನು ಮನರಂಜಕವಾಗಿ ವಿವರಿಸಿದರು, ಅವರ ಹಾಸ್ಯ ಕವನಗಳಿಗೆ ಸಭಾಂಗಣದಲ್ಲಿ ನಗುವಿನ ಮಳೆ ಹರಿಯಿತು.
ಎರಡನೇ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ಪ್ರೇರಣಾತ್ಮಕ ಭಾಷಣಗಾರ, ಕುಂದಗನ್ನಡದ ರಾಯಭಾರಿ ಶ್ರೀ ಮನು ಹಂದಾಡಿ ವಿಶಿಷ್ಟವಾದ ಕುಂದಾಪುರ ಕನ್ನಡದಲ್ಲಿ ತಮ್ಮದೇ ಜೀವನಾನುಭವಗಳನ್ನು ಹಾಸ್ಯಮಿಶ್ರಿತವಾಗಿ ಪ್ರಸ್ತುತಪಡಿಸಿದರು, ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮೌಲ್ಯಗಳ ಅಗತ್ಯತೆಯನ್ನು ಒತ್ತಿ ಹೇಳಿದರು. ಅವರ ಮಾತುಗಳು ಒಮ್ಮೆ ನಗಿಸುತ್ತಿದ್ದರೆ, ಇನ್ನೊಮ್ಮೆ ಯೋಚನೆಗೆ ದಾರಿತೋರಿಸುತ್ತಿದ್ದವು. ಸಭಾಂಗಣದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು, ನಗುವಿನ ಸದ್ದು, ಚಪ್ಪಾಳೆಗಳ ರಭಸ-ಇವೆಲ್ಲವೂ ಮನು ಹಂದಾಡಿಯವರ ಮಾತುಗಳು ಯುವಮನಸ್ಸನ್ನು ಸ್ಪರ್ಶಿಸಿದ್ದನ್ನು ಸಾಬೀತುಪಡಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ವೆಂಕಟರಾಮ ಭಟ್, ಯುವಕರು ಕನಸು ಕಾಣಬೇಕು, ಆದರೆ ಆ ಕನಸುಗಳನ್ನು ಸಾಧಿಸಲು ಮಾನಸಿಕವಾಗಿ ಸುಸ್ಥಿರವಾಗಿರಬೇಕು. ಒತ್ತಡವನ್ನು ನಿಭಾಯಿಸುವ ಕೌಶಲ್ಯ, ಸಮಯವನ್ನು ಬಳಕೆ ಮಾಡುವ ಬುದ್ಧಿವಂತಿಕೆ ಮತ್ತು ಗುರಿ ಸಾಧಿಸಲು ಬೇಕಾದ ತಾಳ್ಮೆ, ಇವು ಜೀವನವನ್ನು ಸಮೃದ್ಧಗೊಳಿಸುವ ಮೂಲ ಗುಣಗಳು ಎಂದು ಹೇಳಿದರು.
ಕು. ಅಕ್ಷತಾ ಸಂಗಡಿಗರು ಪ್ರಾರ್ಥಿಸಿ, ಯುವ ರೆಡ್ ಕ್ರಾಸ್ ಸಂಚಾಲಕ ಶ್ರೀ ರಮೇಶ್ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಮಹಾಲಿಂಗಪ್ಪ ಆರ್ ಕಾರ್ಯಕ್ರಮ ಸಂಯೋಜಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಪಾಂಡುರoಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.















Leave a Reply