Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶಿವಮೊಗ್ಗಕ್ಕೆ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಉಪನಿರ್ದೇಶಕರಾಗಿ ಮುಂಬಡ್ತಿ
ನಗರಕೇಂದ್ರ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಅವರಿಗೆ ಅಭಿನಂದನೆ, ಬೀಳ್ಕೊಡುಗೆ

ಉಡುಪಿ : ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಸುಮಾರು ವರ್ಷಗಳ ಕಾಲ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಉಪನಿರ್ದೇಶಕರಾಗಿ ಶಿವಮೊಗ್ಗಕ್ಕೆ ಮುಂಬಡ್ತಿ ಪಡೆದ ನಳಿನಿ ಜಿ.ಐ. ಅವರಿಗೆ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದಿoದ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ ಸೋಮವಾರ ಉಡುಪಿ ಅಜ್ಜರಕಾಡಿನ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು.

ಗ್ರಂಥಾಲಯ ಇಲಾಖೆ ಬೆಂಗಳೂರು ಇದರ ನಿವೃತ್ತ ಉಪನಿರ್ದೇಶಕ ವೆಂಕಟೇಶ್ ಸಿ.ಜೆ. ಅವರು ಅಭಿನಂದನಾ ನುಡಿಗಳನ್ನಾಡಿ, ಉಡುಪಿ ನಗರ ಕೇಂದ್ರ ಹಾಗೂ ಜಿಲ್ಲಾಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಒಟ್ಟು 18 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಳಿನಿ ಜಿ.ಐ. ಅವರ ಸಾಧನೆ ಅಭಿನಂದನೀಯ. ಅವರ ಕಾಲದಲ್ಲಿ ಉಡುಪಿ ನಗರ ಕೇಂದ್ರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಹಲವಾರು ಶಾಖಾ ಗ್ರಂಥಾಲಯಗಳು ಅಲ್ಲದೆ ಸ್ವಂತ ನಿವೇಶನಗಳನ್ನು ಹೊಂದುವoತೆ ಮಾಡಿದ್ದಾರೆ.

ಪ್ರಮುಖವಾಗಿ ಉಡುಪಿ ಅಜ್ಜರಕಾಡಿನ ನಗರಕೇಂದ್ರ ಗ್ರಂಥಾಲಯ ಸುಮಾರು 5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ರಾಜ್ಯದಲ್ಲಿಯೇ ಮಾದರಿಯಾಗಿ ನಿರ್ಮಾಣಗೊಂಡಿದೆ. ಓರ್ವ ಅಧಿಕಾರಿ ಎಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ ಎಂಬುದಕ್ಕಿoತಲೂ ಅವರ ಸೇವಾವಧಿಯಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎನ್ನುವಾಗ ನಳಿನಿ ಜಿ.ಐ. ಅವರ ಸಾಧನೆಗಳು ಇತರರಿಗೆ ಮಾದರಿಯಾಗಿವೆ. ಅರ್ಹವಾಗಿಯೇ ಅವರು ಉಪನಿರ್ದೇಶಕರಾಗಿ ಬಡ್ತಿ ಲಭಿಸಿದೆ. ಇದೀಗ ಶಿವಮೊಗ್ಗ ಜಿಲ್ಲಾ ಗ್ರಂಥಾಲಯಕ್ಕೆ ಉಪನಿರ್ದೇಶಕರಾಗಿ ವರ್ಗಾವಣೆ ಹೊಂದಿರುವ ಅವರು ಅಲ್ಲಿಯೂ ಅತ್ಯುತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.

ನಳಿನಿ ಜಿ.ಐ.ಅವರು 1997 ರಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಸಹಾಯಕ ಗ್ರಂಥಪಾಲಕರಾಗಿ ಸೇವೆಗೆ ಸೇರ್ಪಡೆಗೊಂಡು, ಮಂಗಳೂರು ಬಾವುಟಗುಡ್ಡೆಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಕರ್ತವ್ಯಕ್ಕೆ ಸೇರಿದರು. 2003 ರಲ್ಲಿ ಗ್ರಂಥಪಾಲಕರಾಗಿ ಪದೋನ್ನತಿ ಪಡೆದರು. ನಂತರ 2007 ರಲ್ಲಿ ಪ್ರಭಾರ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಉಡುಪಿ ನಗರ ಕೇಂದ್ರ ಗ್ರಂಥಾಲಯಕ್ಕೆ ವರ್ಗಾವಣೆಗೊಂಡರು.

ಈ ಸಂದರ್ಭದಲ್ಲಿ ಇವರು ಉಡುಪಿ ನಗರ ಸಭಾ ವ್ಯಾಪ್ತಿಯ ಪುತ್ತೂರು, ದೊಡ್ಡಣಗುಡ್ಡೆ, ಬೈಲೂರು, ಮಣ್ಣಪಳ್ಳ, ಹೆರ್ಗ, ಮೂಡುಬೆಟ್ಟು, ಚಂದುಮೈದಾನ ಸೇರಿದಂತೆ ಒಟ್ಟು 7 ಶಾಖಾ ಗ್ರಂಥಾಲಯಗಳನ್ನು ತೆರೆದು ಸಾರ್ವಜನಿಕರ ಜ್ಞಾನಾರ್ಜನೆಗೆ ಅನುವು ಮಾಡಿಕೊಟ್ಟರು. 2013 ರಲ್ಲಿ ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಹೆಚ್ಚುವರಿ ಪ್ರಭಾರ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಕಾರ್ಯಭಾರವನ್ನು ವಹಿಸಿಕೊಂಡರು. ಈ ಸಮಯದಲ್ಲಿ ಉಡುಪಿ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸ್ವಂತ ನಿವೇಶನ ಪಡೆಯಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ, ಅಜ್ಜರಕಾಡು ಪುರಭವನದ ಬಳಿ ಸುಮಾರು 20 ಸೆಂಟ್ಸ್ ನಿವೇಶನವನ್ನು ಪಡೆಯುವಲ್ಲಿ ಯಶಸ್ವಿಯಾದರು. ಇಲ್ಲಿಯೇ ಎಲ್ಲಾ ರೀತಿಯ ಆಧುನಿಕ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಮಾರು 5.18 ಕೋಟಿ ರೂ.ವೆಚ್ಚದ ಡಿಜಿಟಲ್ ಗ್ರಂಥಾಲಯ ಕಟ್ಟಡ ತಲೆ ಎತ್ತುವಂತೆ ಮಾಡಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಳ ಮಹಡಿ ಕಾಮಗಾರಿಗೆ 87.50 ಲಕ್ಷ, ನೆಲಮಹಡಿ ಕಾಮಗಾರಿಗೆ ಅಂದಿನ ಸಂಸದರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ನಿಧಿಯಿಂದ 99.50 ಲಕ್ಷ ರೂ., ಒಂದನೇ ಮತ್ತು ಎರಡನೇ ಮಹಡಿ ಕಾಮಗಾರಿಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ವತಿಯಿಂದ3 ಕೋಟಿ ಅನುದಾನ ಬರಲು ಹಗಲಿರುಳು ಶ್ರಮಿಸಿದ್ದಾರೆ. ಈ ಗ್ರಂಥಾಲಯ 2022ರ ಏ.11ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಯನ್ನು ಮಾಡಿಸಿ ಸಾರ್ವಜನಿಕ ಓದುಗರಿಗೆ ಅರ್ಪಿಸಿದ್ದಾರೆ.

ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಪ್ರಭಾರ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ವರ್ಗಾವಣೆಗೊಂಡ ಸಂದರ್ಭದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಡಳಿದ ಸಹಕಾರದೊಂದಿಗೆ ನಡೆಸಿದ್ದಾರೆ.ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿವಿಧ ಪರೀಕ್ಷೆಗಳಿಗೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡು ತುಂಬಾ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದ್ದಾರೆ. ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಕಾರ್ಕಳ ಶಾಖಾ ಗ್ರಂಥಾಲಯದ ವಿಸ್ತರಣಾ ಕಟ್ಟಡವನ್ನು ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸುವಲ್ಲಿ ನಳಿನಿ ಜಿ.ಐ. ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಅಲ್ಲದೆ ಕುಂದಾಪುರ ಗ್ರಂಥಾಲಯ ಕಟ್ಟಡ ವಿಸ್ತರಣೆಗೆ 60 ಲಕ್ಷ ರೂ., ಸಾಲಿಗ್ರಾಮ ಗ್ರಂಥಾಲಯ ಕಟ್ಟಡ ವಿಸ್ತರಣೆಗೆ 40 ಲಕ್ಷ , ಬೈಂದೂರು, ಹೆಬ್ರಿ, ನಲ್ಲೂರು ಗ್ರಂಥಾಲಯಗಳು ಸೇರಿದಂತೆ ಸ್ವಂತ 10 ನಿವೇಶನಗಳನ್ನು ಹೊಂದುವಲ್ಲಿ ಶ್ರಮಿಸಿದ್ದಾರೆ. 2022ರ ಏ.4ರಂದು ಮುಖ್ಯ ಗ್ರಂಥಾಲಯ ಅಧಿಕಾರಿಯಾಗಿ ಪದೋನ್ನತಿ ಹೊಂದಿ ಮತ್ತೆ ಉಡುಪಿ ನಗರ ಕೇಂದ್ರ ಗ್ರಂಥಾಲಯಕ್ಕೆ ವರ್ಗಾವಣೆಗೊಂಡರು. 

ಸಾರ್ವಜನಿಕ ಗ್ರಂಥಾಲಯ ಕ್ಷೇತ್ರದಲ್ಲಿ ಇವರ ಸೇವೆಯನ್ನು ಗುರುತಿಸಿ 2014ನೇ ಸಾಲಿನ ಗ್ರಂಥಪಾಲಕರ ದಿನಾಚರಣೆಯ 2014ರ ಆ.12 ರಂದು ಗುಲ್ಬರ್ಗದಲ್ಲಿ ಜರುಗಿದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಗ್ರಂಥಾಲಯ ರಾಜ್ಯ ಸಚಿವ ಕಿಮ್ಮನೆ ರತ್ನಾಕರ್ ಅವರು ನಳಿನಿ ಜಿ.ಐ. ಅವರಿಗೆ ` ಗ್ರಂಥಾಲಯ ಸೇವಾ ಪುರಸ್ಕಾರ ‘ ನೀಡಿ ಗೌರವಿಸಿದ್ದಾರೆ. ಉಡುಪಿ ಜಿಲ್ಲಾಡಳಿತ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಂದು 2021-22ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು 2022ರ ಏ.21 ರಂದು ನೀಡಿ ಗೌರವಿಸಿದೆ.

ನಳಿನಿ ಜಿ.ಐ. ಅವರು ಪ್ರಸ್ತುತ ಶಿವಮೊಗ್ಗಕ್ಕೆ ಜಿಲ್ಲಾ ಗ್ರಂಥಾಲಯಕ್ಕೆ ಉಪನಿರ್ದೇಶಕರಾಗಿ ಹಾಗೂ ಹಾಸನ ನಗರಕೇಂದ್ರ ಗ್ರಂಥಾಲಯಕ್ಕೆ ಹೆಚ್ಚುವರಿ ಸೇವೆ ಸಲ್ಲಿಸಲಿದ್ದಾರೆ. ಅಭಿನಂದನೆ ಸ್ವೀಕರಿಸಿ ನಳಿನಿ ಜಿ.ಐ. ಅವರು ಮಾತನಾಡಿ, 18 ವರ್ಷಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಅದರಲ್ಲೂ ನನ್ನಾವಧಿಯಲ್ಲಿ ಸುಮಾರು 5.18 ಕೋಟಿ ವೆಚ್ಚದಲ್ಲಿ ಅಜ್ಜರಕಾಡು ಡಿಜಿಟಲ್ ಗ್ರಂಥಾಲಯ ನಿರ್ಮಾಣಗೊಂಡಿರುವುದು ವೃತ್ತಿ ಜೀವನದಲ್ಲಿಯೇ ಅತ್ಯಂತ ಖುಷಿಕೊಟ್ಟ ಸಂಗತಿ.

ಈ ಎಲ್ಲಾ ಸಾಧನೆಗಳಿಗೆ ಸಹಕಾರ ನೀಡಿದ ಜಿಲ್ಲಾಧಿಕಾರಿಗಳು, ಗ್ರಂಥಾಲಯ ಪ್ರಾಧಿಕಾರದ ಸದಸ್ಯರು, ನಗರ ಹಾಗೂ ಜಿಲ್ಲಾ ಗ್ರಂಥಾಲಯದ ಸಿಬಂದಿಗಳು, ಜನಪ್ರತಿನಿಧಿಗಳು ಹಾಗೂ ಓದುಗರಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಭಾರ ಮುಖ್ಯ ಗ್ರಂಥಾಲಯಾಧಿಕಾರಿ ವನಿತಾ ಕೆ. ಶುಭಾಶಂಸನೆಗೈದರು, ನಗರಕೇoದ್ರ ಗ್ರಂಥಾಲಯದ ಪ್ರಭಾರ ಮುಖ್ಯ ಗ್ರಂಥಾಲಯ ಅಧಿಕಾರಿ ನಮಿತಾ ಬಿ. ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ನಿವೃತ್ತ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಹಿರಿಯ ಉಪನಿರ್ದೇಶಕರು ಹಾಗೂ ಲೆಕ್ಕಪರಿಶೋಧಕರುಜಿಲ್ಲಾ ಖಜಾನೆ ಉಪನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ, ಉಡುಪಿ ನಗರ ಸಭೆ, ಉಡುಪಿ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ವಿವಿಧ ಶಾಖಾ ಸಿಬ್ಬಂದಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.

ನಗರಕೇಂದ್ರ ಗ್ರಂಥಾಲಯದ ಪ್ರಥಮ ಧರ್ಜೆ ಸಹಾಯಕಿ ಶಕುಂತಳಾ ಕುಂದರ್ ಪರಿಚಯಿಸಿದರು. ನಗರಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ರಂಜಿತಾ ಸಿ. ಸ್ವಾಗತಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಥಮ ದರ್ಜೆ ಸಹಾಯಕಿ ಪ್ರೇಮಾ ಎಂ. ಕಾರ್ಯಕ್ರಮ ನಿರೂಪಿಸಿದರು. ಹಾಗೂ ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ವಂದಿಸಿದರು.

Leave a Reply

Your email address will not be published. Required fields are marked *