“ಪ್ರಾಥಮಿಕ ಹಂತದ ವಿದ್ಯಾರ್ಥಿಗಳು, ಆಂಗ್ಲಭಾಷೆಯ ಸಹಾಯವಿಲ್ಲದೆ ಕನ್ನಡದಲ್ಲೇ ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬರೆಯುವುದು ಸಾಧ್ಯವಿದೆ. ಇದಕ್ಕಾಗಿ ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶ ನಮ್ಮದಾಗಿದೆ” ಎಂದು ಕರಾವಳಿ ವಿಕಿಪಿಡಿಯನ್ ಸ್ಥಾಪಕ ಕಾರ್ಯದರ್ಶಿ, ವಿಶ್ವ ಕನ್ನಡ ಫೌಂಡೇಶನ್ ನಿರ್ದೇಶಕರು, ವಿಜ್ಞಾನಿಗಳಾದ ಡಾ. ಯು.ಬಿ. ಪವನಜ ಇವರು ನುಡಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು ಇಲ್ಲಿಯ ವಿದ್ಯಾರ್ಥಿಗಳಿಗೆ ಸ್ಕ್ರಾಚ್ ಪ್ರೋಗ್ರಾಮಿಂಗ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶ್ವ ಕನ್ನಡ ಫೌಂಡೇಶನ್ ನ ಇನ್ನೋರ್ವ ನಿರ್ದೇಶಕರು, ವಿಜ್ಞಾನಿಗಳಾದ ಶ್ರೀ ಆನಂದ ಸಾವಂತ ಇವರು ಇಡೀ ದಿನ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಶಾಲೆಯ 7ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಶಾಲೆಯ ಕಂಪ್ಯೂಟರ್ ಲ್ಯಾಬ್ನಲ್ಲಿ ನಡೆದ ಈ ತರಬೇತಿಯ ಪ್ರಯೋಜನವನ್ನು ಪಡೆದರು ಮತ್ತು ಉತ್ತಮ ಪ್ರತಿಕ್ರಿಯೆಯನ್ನು ನೀಡಿದರು.

ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀ ಸುಧಾಕರ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ಡಯೆಟ್ ಉಡುಪಿಯ ಪ್ರಾಂಶುಪಾಲರಾದ ಶ್ರೀ ಅಶೋಕ ಕಾಮತ್, ಉಪನ್ಯಾಸಕರಾದ ಶ್ರೀ ನಾಗರಾಜ್, ಶ್ರೀ ಸುರೇಶ ಭಟ್, ಶಾಲಾ ಶಿಕ್ಷಕರಾದ ಸಂಜೀವ ಎಂ, ವಿಜಯಾ ಆರ್, ವಿಜಯ ಶೆಟ್ಟಿ, ಸ್ವಾತಿ ಬಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶೇಖರ ಕುಮಾರ ಸ್ವಾಗತಿಸಿದರು. ಸಹಶಿಕ್ಷಕಿ ವಿಜಯಾ ಆರ್ ವಂದಿಸಿದರು. ಮತ್ತು ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.















Leave a Reply