ಮಣಿಪಾಲ, ಡಿಸೆಂಬರ್ 17, 2025: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ, ಮಣಿಪಾಲ್ ಹಾಸ್ಪಿಸ್ ಮತ್ತು ರೆಸ್ಪೈಟ್ ಸೆಂಟರ್ನಲ್ಲಿ (ಎಂಎಚ್‌ಆರ್‌ಸಿ) ನೂತನವಾಗಿ ನಿರ್ಮಿಸಲಾದ ‘ಹರೀಶ್ ಮತ್ತು ಬೀನಾ ಶಾ ಫೌಂಡೇಶನ್ ಕ್ಲಿನಿಕಲ್ ಬ್ಲಾಕ್’ ಬುಧವಾರ ಲೋಕಾರ್ಪಣೆಗೊಂಡಿತು. ಆರೋಗ್ಯ ವಲಯದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮಾನವೀಯ ಸೇವೆಗೆ ಮಾಹೆ ಸದಾ ಬದ್ಧವಾಗಿದ್ದು, ಸಂಸ್ಥೆಯ ಹಳೆಯ ವಿದ್ಯಾರ್ಥಿಯೊಬ್ಬರು ಈ ಮಹತ್ವದ ಕಾರ್ಯಕ್ಕೆ ಬೆಂಬಲ ನೀಡಿರುವುದು ಮಹತ್ವದ ಸಂಗತಿಯಾಗಿದೆ.
ಈ ನೂತನ ಬ್ಲಾಕ್ ಉದ್ಘಾಟನೆಯ ಮುಖ್ಯ ಅತಿಥಿಯಾಗಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ ಮಣಿಪಾಲ್) ಹಳೆಯ ವಿದ್ಯಾರ್ಥಿ (1975ರ ಬ್ಯಾಚ್) ಹಾಗೂ ಹರೀಶ್ ಮತ್ತು ಬೀನಾ ಶಾ ಫೌಂಡೇಶನ್‌ನ ಅಧ್ಯಕ್ಷರಾದ ಹರೀಶ್ ಶಾ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಶಾ, ʼನನ್ನ ಬದುಕಿಗೊಂದು ಭದ್ರ ಬುನಾದಿ ಹಾಕಿಕೊಟ್ಟ ಮಾಹೆಗೆ ನಾನು ಸದಾ ಋಣಿಯಾಗಿರುತ್ತೇನೆ. ಮಾನವೀಯ ಮೌಲ್ಯದ ಪಾಠ ಹೇಳಿಕೊಟ್ಟ ಸಂಸ್ಥೆಯೊಂದಿಗೆ ಸಮಾಜಮುಖಿ ಕೆಲಸ ಮಾಡಲು ಕೈಜೋಡಿಸಿರುವುದು ಅತ್ಯಂತ ಖುಷಿ ತಂದಿದೆ. ಜೀವನದ ಅತ್ಯಂತ ಕ್ಲಿಷ್ಟಕರ ಹಂತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಘನತೆ, ನೆಮ್ಮದಿ ಮತ್ತು ಗೌರವ ಸಿಗಬೇಕು ಎಂಬ ನಮ್ಮ ನಂಬಿಕೆಗೆ ಈ ಹೊಸ ಬ್ಲಾಕ್ ಸಾಕ್ಷಿಯಾಗಿದೆ. ಇಲ್ಲಿನ ಸೌಲಭ್ಯ ಮತ್ತು ಸೇವೆಗಳು ರೋಗಿಗಳ ಕೊನೆಯ ದಿನಗಳನ್ನು ಲವಲವಿಕೆಯಿಂದ ಕಳೆಯುವಂತೆ ಮಾಡಲಿವೆʼ ಎಂದು ಆಶಯ ವ್ಯಕ್ತಪಡಿಸಿದರು.
ಮಾಹೆಯೊಂದಿಗೆ ತಮ್ಮ ಫೌಂಡೇಶನ್ ಹೊಂದಿರುವ ಬಾಂಧವ್ಯ ಹೀಗೆ ಮುಂದುವರಿಯಲಿದೆ ಎಂದ ಅವರು, ʼಪ್ರಸ್ತುತ ವರ್ಷದಲ್ಲಿ ʼಮಾಹೆ ಎಜು ಎಂಪವರ್ ವಿದ್ಯಾರ್ಥಿವೇತನ’ ಅಡಿಯಲ್ಲಿ ಎಂಐಟಿ ಮಣಿಪಾಲ್ ಮತ್ತು ಬೆಂಗಳೂರು ಕ್ಯಾಂಪಸ್‌ನ 19 ವಿದ್ಯಾರ್ಥಿಗಳಿಗೆ ನಮ್ಮ ಫೌಂಡೇಶನ್ ವತಿಯಿಂದ ಸಂಪೂರ್ಣ ವಿದ್ಯಾರ್ಥಿವೇತನ ನೀಡಲಾಗಿದೆ. ಅಲ್ಲದೆ, ಅಸ್ಥಿಮಜ್ಜೆ ಕಸಿ (ಬೋನ್ ಮ್ಯಾರೊ) ಚಿಕಿತ್ಸೆ ಪಡೆಯುತ್ತಿರುವ ಬಡ ಮಕ್ಕಳು ಮತ್ತು ಅವರ ಪೋಷಕರಿಗೆ ವಸತಿ ಒದಗಿಸುವ ‘ಆಕ್ಸೆಸ್ ಫಾರ್ ಲೈಫ್’ ಕಾರ್ಯಕ್ರಮಕ್ಕೂ ಬೆಂಬಲ ನೀಡಿದೆʼ ಎಂದು ಹೇಳಿದರು. ಶ್ರೀಮತಿ ವಸಂತಿ ಆರ್ ಪೈ, ಟ್ರಸ್ಟಿ, ಮಾಹೆ ಟ್ರಸ್ಟ್ ಅವರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ʼಈ ಸಂದರ್ಭ ಯಾವುದೇ ವಿಶ್ವವಿದ್ಯಾಲಯಕ್ಕೂ ಒಂದು ಅವಿಸ್ಮರಣೀಯ ಕ್ಷಣವಾಗಿರಲಿದೆ. ಹಳೆಯ ವಿದ್ಯಾರ್ಥಿಯು ಸಮಾಜಮುಖಿ ಕೆಲಸಗಳಲ್ಲಿ ಕೈಜೋಡಿಸುವುದು ವಿಶ್ವವಿದ್ಯಾಲಯಕ್ಕೆ ನಿಜಕ್ಕೂ ಹಮ್ಮೆಯ ವಿಚಾರ. ಇಂದು ಉದ್ಘಾಟನೆಗೊಂಡ ಈ ಸೌಲಭ್ಯವು ಆರೋಗ್ಯ ಸೇವೆಯಲ್ಲಿ ಪರಿವರ್ತನೆ ತರುವ ಮಾಹೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಎಂಎಚ್‌ಆರ್‌ಸಿಯು ವೈದ್ಯಕೀಯ ಶ್ರೇಷ್ಠತೆ ಮತ್ತು ಮಾನವೀಯತೆಯ ಸಂಗಮವಾಗಿ ಜೊತೆಗೆ ಭರವಸೆ ಮತ್ತು ಚೇತರಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆʼ ಎಂದರು.
ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಮಾತನಾಡಿ, ʼಶಿಕ್ಷಣದ ಉದ್ದೇಶವು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಒಳಿತು ಮಾಡುವಂತೆ ಸಶಕ್ತಗೊಳಿಸುವುದು ಎಂಬ ಡಾ. ಟಿ.ಎಂ.ಎ. ಪೈ ಅವರ ಆಶಯವನ್ನು ನಮ್ಮ ವಿದ್ಯಾರ್ಥಿಗಳು ಪಾಲಿಸುತ್ತಿರುವುದು ಸಂತಸದ ವಿಷಯ. ಅಸಂಖ್ಯಾತ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ನೆರವಾಗುವ ಈ ಪ್ರಮುಖ ಸೌಲಭ್ಯಕ್ಕೆ ಬೆಂಬಲ ನೀಡಿದ ಹರೀಶ್ ಮತ್ತು ಬೀನಾ ಶಾ ಫೌಂಡೇಶನ್‌ಗೆ ನಾವು ಅಭಾರಿʼ ಎಂದು ಹೇಳಿದರು.
ಹೆಲ್ತ್ ಸೈನ್ಸ್ ವಿಭಾಗದ ಸಹ ಕುಲಪತಿ ಡಾ. ಶರತ್ ಕೆ. ರಾವ್ ಅವರು ಎಲ್ಲರನ್ನು ಸ್ವಾಗತಿಸಿ, ಎಂಎಚ್ಆರ್‌ಸಿಯಲ್ಲಿನ ಸಂಶೋಧನಾ ಕಾರ್ಯಗಳೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಮಿಳಿತಗೊಳಿಸಿರುವುದು ಆರೋಗ್ಯ ಸೇವೆಯೆಡೆಗಿನ ನಮ್ಮ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಈ ಹೊಸ ಚಿಕಿತ್ಸಾ ವಿಭಾಗವು, ಪ್ಯಾಲಿಯೇಟಿವ್ ಕೇರ್ ಕ್ಷೇತ್ರದಲ್ಲಿ ಅಧ್ಯಯನ, ಚಿಕಿತ್ಸೆ ಹಾಗೂ ಸಂಶೋಧನೆಗೆ ನಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಅತ್ಯುತ್ತಮ ವಾತಾವರಣವನ್ನು ಕಲ್ಪಿಸಲಿದೆʼ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) 12.84 ಕೋಟಿ ರೂ. ಅನುದಾನದೊಂದಿಗೆ ಮಾಹೆ ಎಂಎಚ್‌ಆರ್‌ಸಿಯಲ್ಲಿ ಐಸಿಎಂಆರ್-ಮಾಹೆ ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಕೇಂದ್ರವನ್ನು ಇದೇ ಅಕ್ಟೋಬರ್ 2025ರಲ್ಲಿ ಸ್ಥಾಪಿಸಿರುವ ಬಗ್ಗೆ ಈ ವೇದಿಕೆಯಲ್ಲಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಂಎಚ್‌ಆರ್‌ಸಿ ಕುರಿತ ವಿಡಿಯೋ ಪ್ರದರ್ಶಿಸಲಾಯಿತು. ಎಂಎಚ್‌ಆರ್‌ಸಿ ನಿರ್ದೇಶಕಿ ಡಾ. ಸೀಮಾ ರಾಜೇಶ್ ರಾವ್ ವಂದಿಸಿದರು. ಮಾಹೆ ಸಿಒಒ ಡಾ. ಆನಂದ್ ವೇಣುಗೋಪಾಲ್, ಮಣಿಪಾಲ್ ಫೌಂಡೇಶನ್ ಸಿಇಒ ಹರಿನಾರಾಯಣ ಶರ್ಮಾ, ಕೆಎಂಸಿ ಮಣಿಪಾಲದ ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ನವೀನ್ ಸಾಲಿನ್ಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಬಗ್ಗೆ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ. ಮಣಿಪಾಲ್, ಮಂಗಳೂರು, ಬೆಂಗಳೂರು, ಜಮ್ಶೆಡ್‌ಪುರ ಮತ್ತು ದುಬೈನಲ್ಲಿರುವ ತನ್ನ ಕ್ಯಾಂಪಸ್‍ಗಳನ್ನು ಹೊಂದಿದೆ. ಹೆಲ್ತ್ ಸೈನ್ಸ್, ಮ್ಯಾನೇಜ್‌ಮೆಂಟ್, ಕಾನೂನು, ಮಾನವಿಕ ಮತ್ತು ತಾಂತ್ರಿಕ ವಿಜ್ಞಾನ ಸೇರಿದಂತೆ 400ಕ್ಕೂ ಹೆಚ್ಚು ವಿಷಯಗಳಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ. ಅತ್ಯುತ್ತಮ ಶೈಕ್ಷಣಿಕ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಯಿಂದಾಗಿ ಮಾಹೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ.
ಅಕ್ಟೋಬರ್ 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಸ್ಥಾನಮಾನ ನೀಡಿ ಗೌರವಿಸಿದೆ. ಪ್ರಸ್ತುತ ಎನ್‌ಐಆರ್‌ಎಫ್ (NIRF) ರ‍್ಯಾಂಕಿಂಗ್ನಲ್ಲಿ ಮಾಹೆ 3ನೇ ಸ್ಥಾನದಲ್ಲಿದೆ. ಪರಿವರ್ತನಾಶೀಲ ಕಲಿಕೆ ಮತ್ತು ಅತ್ಯತ್ತಮ ಕ್ಯಾಂಪಸ್ ಜೀವನವನ್ನು ಬಯಸುವ ವಿದ್ಯಾರ್ಥಿಗಳಿಗೆ ಹಾಗೂ ಅತ್ಯುತ್ತಮ ಪ್ರತಿಭೆಗಳನ್ನು ಹುಡುಕುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾಹೆ ಒಂದು ಅಚ್ಚುಮೆಚ್ಚಿನ ತಾಣವಾಗಿದೆ.














Leave a Reply