ಪರಿಶಿಷ್ಟ ಪಂಗಡದ ಮೀಸಲಾತಿ ಅಡಿಯಲ್ಲಿ ಬರುವ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಹೆಚ್ಚಾಗಿ ವಾಸಿಸುವ ಕೊರಗ*ಸಮುದಾಯ ದವರು ಸರಕಾರದಿಂದ ಮೀಸಲಾತಿ ಅಡಿಯಲ್ಲಿ ಸಿಗುವ ಸ್ವಂತ ಭೂಮಿ, ವಸತಿ, ಉನ್ನತ ಶಿಕ್ಷಣ, ಸರಕಾರಿ ಉದ್ಯೋಗ, ಸ್ವ ಉದ್ಯೋಗ, ಹೀಗೆ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಅಕ್ಷರಶಃ ವಂಚಿತರಾಗಿದ್ದಾರೆ, ವಂಚಿತರಾಗುತ್ತಲೇ ಇದ್ದಾರೆ.
ಕಾರಣ ಸ್ಪಷ್ಟ… ಆರ್ಥಿಕವಾಗಿ ಬಹಳ, ಹಿಂದಿರುವ ಕೊರಗ ಸಮುದಾಯ ಇದೇ ಪರಿಶಿಷ್ಟ ಪಂಗಡದ ಅಡಿಯಲ್ಲಿ ಬರುವ ಬಲಿಷ್ಠ ಸ್ಪರ್ಶ ಸಮುದಾಯಗಳಾದ ಮರಾಠಿ, ಮುಗೇರ, ವಾಲ್ಮೀಕಿ, ಬೇಡ ಇನ್ನೂ ಅನೇಕ ಸಮುದಾಯ ಗಳೊಂದಿಗೆ ಸ್ಪರ್ಧೆಗಿಳಿಯಲಾರದೆ ಸೊರಗಿ ಹೋಗಿದ್ದಾರೆ.
ಮೀಸಲಾತಿ ಪಡೆದು ಸಮಾಜದಲ್ಲಿ ಆರ್ಥಿಕ ವಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ಕನಸು ಕಾಣುತ್ತಿರುವ ಕೊರಗ ಸಮುದಾಯದವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೆಂಟು ವರ್ಷಗಳು ಉರುಳಿದರೂ, ಇಂದಿಗೂ ಜಾತಿ ವಿಷಯ ಬಂದಾಗ ಅಸ್ಪೃಶ್ಯರು ಕೂಡ ಸ್ಪರ್ಷ ಜನಾಂಗದವರಾಗುತ್ತಾರೆ.
ಹಾಗೆಯೇ ಉಡುಪಿ ಜಿಲ್ಲೆಯಯಲ್ಲಿ ಕಂಡು ಬರುವ ಪರಿಶಿಷ್ಟ ಜಾತಿಯ ಬತ್ತಾಡ ಹಾಗೂ ಮೇರ ಸಮುದಾಯದವರ ಪರಿಸ್ಥಿತಿ ಹೀಗೆಯೇ ಇದೆ. ಇದು ಶತ ಶತಮಾನಗಳ ದುರಂತ ಅಲ್ಲದೆ ಮತ್ತೇನು? ಉನ್ನತ ಮಟ್ಟದ ಮೀಸಲಾತಿ ಸೌಲಭ್ಯಗಳು ಬಲಿಷ್ಠ ದಲಿತರ ಪಾಲಾಗುತ್ತಿದ್ದು, ಗ್ರಾಮ ಪಂಚಾಯತ್ ಗಳಲ್ಲಿ ಸಿಗುವ ಹಾರೆ, ಪಿಕಾಸೆ, ಕುಕ್ಕರ್,ಗಳಂತ ವಸ್ತುಗಳು ಮಾತ್ರ ಈ ಅಮಾಯಕ ದಲಿತರಿಗೆ ಸಿಗುವ ದೊಡ್ಡ ಮೀಸಲಾತಿ ಸೌಲಭ್ಯಗಳು.
ಈಗ ಒಳ ಮೀಸಲಾತಿ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇದೇ ಸರಿಯಾದ ಸಮಯ. ಉಪ ವರ್ಗೀಕರಣ ದಡಿಯಲ್ಲಿ, ಒಳ ಮೀಸಲಾತಿ ಜಾರಿ ಮಾಡುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇವರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.ಹಾಗು ಕೊರಗ ಸಮುದಾಯದ ವರು ಎಲ್ಲರ ಹಾಗೆ ಮನುಷ್ಯರೆಂದು ಪರಿಗಣಿಸಿ ಈ ಜನಾಂಗವನ್ನು ಪ್ರತ್ಯೇಕ ಪಂಗಡವನ್ನಾಗಿ ಗುರುತಿಸಿ ಇವರಿಗೆ ಪ್ರತ್ಯೇಕವಾದ ವಿಶೇಷ ಮೀಸಲಾತಿಯನ್ನು ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಶ್ರೀನಿವಾಸ್ ವಡ್ಡರ್ಸೆ ಉಡುಪಿ ಜಿಲ್ಲೆ ✍🏻














Leave a Reply