ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರವೂ ಉಡುಪಿ ಜಿಲ್ಲೆಯಲ್ಲಿ ದಲಿತ ಸಮುದಾಯದ ಬಗ್ಗೆ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ದಲಿತ ಸಮುದಾಯ ಕೃಷಿ ಭೂಮಿ, ನಿವೇಶನ , ವಸತಿ, ಆರೋಗ್ಯ, ನಿರುದ್ಯೋಗ, ಶಿಕ್ಷಣ, ಅಸ್ಪ್ರಶ್ಯತೆ, ದೌರ್ಜನ್ಯ ಹೀಗೆ ಅನೇಕ ಜಠಿಲ ಸಮಸ್ಯೆಗಳನ್ನು ಎದುರಿಸುತ್ತಿದೆ.
ಅದರಲ್ಲೂ ಭೂಮಿ ಹಕ್ಕಿನ ಹೋರಾಟ ಬೇಡಿಕೆ ಇಂದು ನಿನ್ನೆಯದಲ್ಲ. ದಲಿತರ ಭೂಮಿ ಹೋರಾಟಕ್ಕೆ, ಚಳುವಳಿಗೆ, ಬೇಡಿಕೆಗೆ ರಾಜ್ಯ ಸರಕಾರದಿಂದ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾಜ್ಯದಲ್ಲಿ, ಜಿಲ್ಲೆಯಲ್ಲಿ ಸರಕಾರಿ ಭೂಮಿ ಹಂಚಿಕೆ ಆಗಲೇ ಇಲ್ಲ ಅಂದು ಕೊಳ್ಳಬೇಡಿ. ಉದ್ಯಮಿಗಳಿಗೆ, ಬಲಿಷ್ಠ ರಾಜಕಾರಣಿಗಳಿಗೆ, ಹಣ ಬಲ, ರಾಜಕೀಯ ಮತ್ತು ತೋಳ್ಬಲ ಉಳ್ಳವರಿಗೆ ಸರಕಾರಿ ಭೂಮಿ ಯಥೇಚ್ಚವಾಗಿ ಹಂಚಿಕೆಯಾಗಿದೆ. ದಕ್ಕಿದೆ. ಆದರೆ ದಲಿತರಿಗೆ ಕೊಡಲು ಮಾತ್ರ ಸರಕಾರದ ಬಳಿ ಭೂಮಿ ಇಲ್ಲ. ಡಿಸಿ ಮನ್ನಾ ಭೂಮಿ ಜಿಲ್ಲೆಯಲ್ಲಿ ಸಾಕಷ್ಟಿದ್ದರೂ ಅದು ದಲಿತರಿಗೆ ದಕ್ಕುವುದೇ ಇಲ್ಲ. ಚಳುವಳಿಗಾರರಿಗೆ, ಹೋರಾಟಗಾರರಿಗೆ ನಿವೇಶನ ರಹಿತರಿಗೆ ಕೇವಲ ಎರಡು ಮುಕ್ಕಾಲು ಸೆಣ್ಸ್ ನಿವೇಶನಗಳ ಹಕ್ಕು ಪತ್ರ ಕೊಡಿಸಲು ಸಾಧ್ಯವಿಲ್ಲದಿರುವಾಗ ಜನಪರ ಹೋರಾಟಗಳನ್ನು, ಹೋರಾಟಗಾರರನ್ನು ಜನ ನಂಬುತ್ತಾರೆಯೇ ? ಖಂಡಿತ ಇಲ್ಲ.** *ಸರಕಾರಕ್ಕೆ ,ಜಿಲ್ಲಾಡಳಿತಕ್ಕೆ ಕನಿಷ್ಠ ಪಕ್ಷ ದಲಿತರ ಕುಂದು ಕೊರತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸುವ, ಪರಿಹಾರಕ್ಕೆ ಪ್ರಯತ್ನಿಸುವ ಕನಿಷ್ಠ ಸೌಜನ್ಯ ಕೂಡ ಇದ್ದಂತಿಲ್ಲ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ, ಪೊಲೀಸ್ ವರಿಷ್ಠಾಧಿಕಾರಿಗಳ,ತಹಶೀಲ್ದಾರರ, ಠಾಣಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ದಲಿತರ ಕುಂದು ಕೊರತೆ ಸಭೆಗಳನ್ನು ತಡೆಹಿಡಿಯಲಾಗಿತ್ತು.
ಅರ್ಥಾತ್ ನಿಲ್ಲಿಸಲಾಗಿತ್ತು. ಈಗಲೂ ಅದೇ ರಾಗ ಅದೇ ಹಾಡು ಎಂಬಂತಿದೆ. ಈ ಬೆಳವಣಿಗೆ ಜಿಲ್ಲೆಯಲ್ಲಿ ಅಧಿಕಾರಿ ವರ್ಗಗಳ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ. ಹಾಗೆಯೇ ಇದಕ್ಕೆ ಸರಕಾರ ಕೂಡ ಸೊಪ್ಪು ಹಾಕಿದ ರೀತಿಯಲ್ಲಿ ಭಾಸವಾಗುತ್ತಿದೆ. ಆದ್ದರಿಂದ ದಲಿತ ಸಂಘಟನೆಗಳು ದಲಿತರ ಭೂಮಿ ಹಕ್ಕಿನ ಹೋರಾಟವನ್ನು ತೀವ್ರ ಗೊಳಿಸುವ ಅಗತ್ಯ ಇದೆ. ಇನ್ನು ದಲಿತರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ವಿಷಯ ಬಂದಾಗ ದೌರ್ಜನ್ಯ ತಡೆ ಕಾಯ್ದೆಯನ್ನೇ ದಲಿತರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿನಾಕಾರಣ ಉದ್ದೇಶ ಪೂರ್ವಕವಾಗಿ ಹುಯಿಲೆಬ್ಬಿಸಲಾಗುತ್ತಿದೆ.
ಇದನ್ನೇ ಸತ್ಯ ಅನ್ನುವಂತೆ ಸಂಬಂಧಿಸಿದ ಇಲಾಖೆಗಳು ಕೂಡ ನಂಬಿ ಕುಳಿತಂತಿವೆ. ವಾಸ್ತವ ಏನೆಂದರೆ ರಾಜ್ಯದಲ್ಲಿ, ಜಿಲ್ಲೆಯಲ್ಲಿ ಇಂದಿಗೂ ಎಷ್ಟೋ ಅಮಾಯಕ ದಲಿತ ಕುಟುಂಬಗಳಿಗೆ ತಮ್ಮ ಹಾಗೂ ತಮ್ಮವರ ಮೇಲೆ ಅವಮಾನ, ದಬ್ಬಾಳಿಕೆ, ಹಲ್ಲೆ, ದೌರ್ಜನ್ಯಗಳು ನಡೆದರೂ ಅದರ ಅರಿವೆಯೇ ಅವರಿಗಿಲ್ಲ. ಇದ್ದರೂ ಅದನ್ನು ಎದುರಿಸುವ ಶಕ್ತಿ ಅವರಿಗಿಲ್ಲ. ಕಾನೂನಿನ ಅರಿವು, ಬಡತನ, ಭಯ ಇದಕ್ಕೆ ಸ್ಪಷ್ಟ ಕಾರಣ. ಇದರ ಲಾಭವನ್ನು ದೌರ್ಜನ್ಯ ನಡೆಸಿದವರು ಯಥೇಚ್ಛವಾಗಿ ಪಡೆದುಕೊಳ್ಳುತ್ತಿದ್ದಾರೆ.
ಇಂತಹ ಅನೇಕ ಅಮಾಯಕ, ನಿರ್ಗತಿಕ ದಲಿತ ಕುಟುಂಬಗಳು ಜಿಲ್ಲೆಯಲ್ಲಿ ಸಾಕಷ್ಟಿವೆ. ಇವರಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವವರು ಯಾರು? ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ದಲಿತ ಸಂಘಟನೆಗಳು, ಮುಖಂಡರು ತಮ್ಮ ಚಳುವಳಿ, ಹೋರಾಟಗಳ ತತ್ವ ಸಿದ್ಧಾಂತಗಳನ್ನೇ ಬದಿಗಿಟ್ಟು ಕಾಂಗ್ರೆಸ್ ಪಕ್ಷಕ್ಕೆ, ಪಕ್ಷದ ಅಭ್ಯರ್ಥಿಗೆ ಬೇಷರತ್ ಬೆಂಬಲ ಸೂಚಿಸಿ ದಲಿತರ ಕಾಲೋನಿಗಳಲ್ಲಿ , ಕೇರಿ ಕೇರಿಗಳಲ್ಲಿ ಬಹಿರಂಗ ಪ್ರಚಾರ ಕೈಗೊಂಡಿದ್ದರು. ಫಲಿತಾಂಶ ಏನೇ ಇರಲಿ, ಇದು ಸಣ್ಣ ವಿಷಯವೇನಲ್ಲ.
ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ಇದನ್ನು ಮೊದಲು ಅನ್ನಬಹುದೇನೋ. ದಲಿತ ನಾಯಕರು ಈ ರೀತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಅಲ್ಲ, ಕೇವಲ ಸಮುದಾಯಕ್ಕೆ ನೆರವಾಗಬೇಕು ಅನ್ನುವ ಸದುದ್ದೇಶದಿಂದ ಅನ್ನುವುದನ್ನು ಕಾಂಗ್ರೆಸ್ ಪಕ್ಷ ಮತ್ತು ಅದರ ಸೋತ ಗೆದ್ದ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು.
ವಿಶೇಷವಾಗಿ ಈ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ, ಜಿಲ್ಲೆಯ ಕಾಂಗ್ರೆಸ್ ನಾಯಕರು, ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸಿ ದಲಿತ ಸಮುದಾಯಕ್ಕೆ, ದಲಿತ ಸಂಘಟನೆಗಳಿಗೆ ಅವಮಾನ, ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುವಾಗ ಎರಡೆರಡು ಬಾರಿ ಆಲೋಚಿಸಬೇಕಾದೀತು ಅನ್ನುವ ಮಾತು ದಲಿತ ಮುಖಂಡರು ಮತ್ತು ಸಮುದಾಯದಲ್ಲಿ ಕೇಳಿ ಬರುತ್ತಿದೆ. ಎಂದು ಶ್ರೀನಿವಾಸ್ ವಡ್ಡರ್ಸೆ, ದಲಿತ ಮುಖಂಡರು, ಉಡುಪಿ ಜಿಲ್ಲೆ.















Leave a Reply