Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಋಷಿಯಾಗದವ, ಖುಷಿ ಇಲ್ಲದವ ಕವಿಯಾಗಲಾರ~ ಹೆಚ್ ಡುಂಡಿರಾಜ್

ಪ್ರತಿಭೆ, ಸ್ಛೂರ್ತಿ ಎರಡೂ ಕವಿಗೆ ಅಗತ್ಯವಿದ್ದು ಕಾವ್ಯ ಸಂವೇದನೆ ಬೆಳೆಸಿಕೊಳ್ಳದಿದ್ದರೆ ಉತ್ತಮ ಕವಿತೆ ರಚನೆಯಾಗದು ಎಂದು ಕವಿ ಎಚ್. ಡುಂಡಿರಾಜ್ ಹೇಳಿದ್ದಾರೆ.

ಅವರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ, ಸಂಸ್ಕøತಿ ವಿಶ್ವ ಪ್ರತಿಷ್ಠಾನದ ಆಶ್ರಯದಲ್ಲಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರಚಿತ ಕವನ ಸಂಕಲನ ತಂಬೂರಿ ಹಾಗೂ ಕಾಯ ತಂಬೂರಿ ನಾಟಕ ಕೃತಿಯನ್ನು ಕುಂಜಿಬೆಟ್ಟು ಏಡನ್ ಇನ್ ಹೋಮ್ ಸ್ಟೇ ಆವರಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಸಹಜವಾಗಿ ಬರೆದರೆ ಅದು ಕಾವ್ಯ ಮಯ, ಯಾರದೋ ಒತ್ತಾಯಕ್ಕೆ ಬರೆದರೆ ಕಾವ್ಯ ಮಾಯ , ದೊಡ್ಡ ದೊಡ್ಡ ಶಬ್ದ, ಪ್ರಾಸ, ಛಂದಸ್ಸು, ಲಯಬದ್ಧವಾಗಿ ಬರೆದದ್ದೂ ಕೆಲವೊಮ್ಮೆ ಕವಿತೆಗಳಾಗೋದಿಲ್ಲ. ಕವಿತೆ ಸರಳವಾಗಿದ್ದು ಕೇಳುಗರ, ಓದುಗರ ಗಮನ ಸೆಳೆಯುವಂತಿರಬೇಕು. ಹಾಡು, ನಾಟಕ ಬರೆಯುವವರಿಗೆ ಇಂದು ಪ್ರೋತ್ಸಾಹ ವಿರಳವಾಗಿದೆ. ನಳ್ಳಿ ತಿರುಗಿಸಿದರೆ ನೀರು ಬರೋದಿಲ್ಲ. ಆದರೆ ವಾಟ್ಸ್ಯಾಪ್ ಆನ್ ಮಾಡಿದರೆ ನೂರಾರು ಕವಿತೆಗಳು ಬರುತ್ತವೆ. ಕವಿತೆ ತಪಸ್ಸು, ಋಷಿಯಾಗದವ, ಖುಷಿ ಇಲ್ಲದವ ಕವಿಯಾಗಲಾರ ಎಂದು ಹೇಳಿದರು.

ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕøತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊಫಸರ್ ಶಂಕರ್, ಉದ್ಯಮಿ ವಿಶ್ವನಾಥ ಶೆಣೈ, ಲೇಖಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.
ಲಹರಿ ಪ್ರಾರ್ಥಿಸಿದರು. ಶಿಲ್ಪಾ ಜೋಶಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.  ಕಸಾಪ  ಘಟಕ ಅಧ್ಯಕ್ಷ ರವಿರಾಜ ಎಚ್. ಪಿ. ಪ್ರಾಸ್ತಾವಿಕ ಮಾತನಾಡಿದರು. ಜನಾರ್ದನ ಕೊಡವೂರು ವಂದಿಸಿದರು.

Leave a Reply

Your email address will not be published. Required fields are marked *