
ಸಂಸ್ಕಾರ, ಶಿಸ್ತು, ಸೇವಾ ಮನೋಭಾವನೆ ಬೆಳೆಸಿಕೊಳ್ಳಿ- ಜಯಕರ ಶೆಟ್ಟಿ ಇಂದ್ರಾಳಿ
ಪರಿಸರಕ್ಕೆ ಪೂರಕವಾಗುವ ಗಿಡಗಳನ್ನು ಹೆಚ್ಚು ನೆಡಬೇಕು- ಡಾ. ಕಿರಣ್ ಆಚಾರ್ಯ
ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಮಾಜಿ ಸಚಿವ ದಿ. ಡಾ. ವಿ.ಎಸ್. ಆಚಾರ್ಯ ಅವರ ಜಯಂತಿಯ ಪ್ರಯುಕ್ತ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ “ಏಕ್ ಪೇಡ್ ಮಾ ಕೆ ನಾಮ್” ಕಾರ್ಯಕ್ರಮವನ್ನು ಮಣಿಪಾಲ ಪ್ರಗತಿ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ 48 ಸಾವಿರ ವಿದ್ಯಾರ್ಥಿಗಳು ತೆರಬೇತಿ ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ಎಳವೆಯಲ್ಲಿಯೇ ಸಂಸ್ಕಾರ, ಶಿಸ್ತು, ಸೇವಾ ಮನೋಭಾವನೆಯನ್ನು ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬೆಳವಣಿಗೆಯಲ್ಲಿ ವಿ.ಎಸ್. ಆಚಾರ್ಯ ಅವರ ಕೊಡುಗೆ ಅಪಾರ. ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ 23 ಎಕರೆ ಜಾಗವನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಅಲ್ಲದೆ ಸಂಸ್ಥೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅವರ ಜಯಂತಿಯನ್ನು ಗಿಡ ನೆಡುವುದರ ಮೂಲಕ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮಣಿಪಾಲ ಕೆಎಂಸಿ ವೈದ್ಯ ಡಾ. ಕಿರಣ್ ಆಚಾರ್ಯ ಮಾತನಾಡಿ, ವೈದ್ಯಕೀಯ ಶಿಕ್ಷಣ ಸಚಿವರಾಗಿ ದೇಶದಲ್ಲಿ ಪ್ರಥಮ ಬಾರಿಗೆ ಆರು ಮೆಡಿಕಲ್ ಕಾಲೇಜುಗಳನ್ನು ಒಂದೇ ವರ್ಷದಲ್ಲಿ ಮಾಡಿದ ಹೆಗ್ಗಳಿಕೆ ವಿ.ಎಸ್.ಆಚಾರ್ಯ ಅವರಿಗೆ ಸಲ್ಲುತ್ತದೆ. ಅವರು ಪರಿಸರ ಪ್ರೇಮಿ ಕೂಡ ಆಗಿದ್ದರು. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಒಂದು ಮರ ಕಡಿದರೆ ಹತ್ತು ಗಿಡಗಳನ್ನು ನೆಡುವ ಸಂಕಲ್ಪ ಮಾಡಬೇಕೆಂದು ಹೇಳುತ್ತಿದ್ದರು. ಇದರಿಂದ ಅಭಿವೃದ್ಧಿ ಆಗುತ್ತದೆ. ಹಾಗೆ ಪರಿಸರವೂ ಉಳಿಯುತ್ತದೆ ಎಂಬುವುದು ಅವರ ಚಿಂತನೆಯಾಗಿತ್ತು ಎಂದರು. ನಮ್ಮ ಪರಿಸರಕ್ಕೆ ಸೂಕ್ತವಾದ ಹಣ್ಣು ಮತ್ತು ಹೂ ಕೊಡುವ ಗಿಡಗಳನ್ನು ಹೆಚ್ಚು ನೆಡಬೇಕು. ಇದರಿಂದ ಪರಿಸರವೂ ಸುಂದರವಾಗಿ ಕಾಣುತ್ತದೆ. ಪ್ರಾಣಿ ಪಕ್ಷಿಗಳಿಗೂ ಆಶ್ರಯ ತಾಣವಾಗುತ್ತದೆ. ಹಾಗಂತ ಅಕೇಶದಂತಹ ವಿನಾಶಕಾರಿ ಗಿಡಗಳನ್ನು ನೆಡಬಾರದು ಎಂದು ಕಿವಿ ಮಾತು ಹೇಳಿದರು.
ಅಲೆವೂರು ಗ್ರಾಪಂ ಅಧ್ಯಕ್ಷ ಯತೀಶ್ ಕುಮಾರ್, ಜಿಲ್ಲಾ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಗೈಡ್ಸ್ ಆಯುಕ್ತೆ ಜ್ಯೋತಿ ಪೈ, ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮೋಹನ್ ಉಪಾಧ್ಯ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್, ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕೊಡವೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಉಡುಪಿ ಟಿಎಪಿಸಿಎಂಎಸ್ ಲಿಮಿಟೆಡ್ ಅಧ್ಯಕ್ಷ ಅಶೋಕ್ ಶೆಟ್ಟಿ ಮೈರ್ಮಾಡಿ, ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹರೀಶ್ ಕಿಣಿ ಅಲೆವೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತೇಜಸ್ ನಿರೂಪಿಸಿದರು. ಅನುಷಾ ಕೋಟ್ಯಾನ್ ಸಿಇಓ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಧನ್ಯವಾದವಿತ್ತರು.
Leave a Reply