
ಮೂಲ್ಕಿ: ಮೂಲ್ಕಿ ಹೊಸ ಅಂಗಣ ಮಾಸ ಪತ್ರಿಕೆಯ ಪ್ರತಿ ತಿಂಗಳ ತಿಂಗಳ ಬೆಳಕು ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಮೂಲ್ಕಿ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆಯಿತು. ಈ ತಿಂಗಳು ದೈವದ ಪಾತ್ರಿ ಮೋಹನ್ ಪೂಜಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಮಾತನಾಡಿ, “ಧಾರ್ಮಿಕ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಾಧಕರನ್ನು ಗುರುತಿಸಿ ಗೌರವಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ” ಎಂದು ಹೇಳಿದರು. ಮೂಲ್ಕಿಯ ಏಕೈಕ ಪತ್ರಿಕೆಯಾದ ‘ಹೊಸ ಅಂಗಣ’, ಹತ್ತು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದೆ. ಪತ್ರಿಕೆಯನ್ನ ನಡೆಸೋದು ಸುಲಭದ ಕೆಲಸವಲ್ಲ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಸಾಹಿತ್ಯದ ಮೇಲೆ ತಮ್ಮ ಆಸಕ್ತಿಯನ್ನು ಇರಿಸಿಕೊಂಡು ಪತ್ರಿಕೆಯನ್ನು ಮುನ್ನಡೆಸುತ್ತಿರುವ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ಪ್ರಯತ್ನ ನಿಜಕ್ಕೂ ಮೆಚ್ಚುವಂತಹದ್ದು ಎಂದರು. ಹತ್ತು ವರ್ಷಗಳಿಂದ ಪತ್ರಿಕೆ ಹಲವಾರು ಹೊಸ ಲೇಖಕರಿಗೆ ಪ್ರೋತ್ಸಾಹ ನೀಡಿದೆ. ಮೂಲ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರು ಗುರುತಿಸದ ಸಾಧಕರನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳು ಸನ್ಮಾನ ಮಾಡುವ ಈ ಪ್ರಯತ್ನಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಬ್ಯಾಂಕ್ ಪ್ರಬಂಧಕ ವಿಠಲ್ ವಾಗ್ಲೆಯವರು ಪತ್ರಿಕೆಯ ಕಾರ್ಯವನ್ನು ಮೆಚ್ಚಿ, ಮೂಲ್ಕಿಯ ಜನಮನ ಗೆದ್ದಿರುವ ‘ಹೊಸ ಅಂಗಣ’ಕ್ಕೆ ತಮ್ಮ ಬ್ಯಾಂಕ್‌ನಿಂದ ಸಾಧ್ಯವಾದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸದಾನಂದ, ಮುಂಬೈ ಮೊಗವೀರ ಪತ್ರಿಕೆಯ ಅಶೋಕ್ ಸುವರ್ಣ, ಚಿತ್ರಾಪು ಕೇಶವಾನಂದ ಸ್ವಾಮೀಜಿ, ಸತೀಶ್ ಕಿಲ್ಪಾಡಿ, ಸರೋಜಿನಿ ಸುವರ್ಣ, ಲ. ಪುಷ್ಪರಾಜ್ ಚೌಟ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಜೋನ್ ಕ್ವಾಡ್ರಸ್, ವಾಸು ಪೂಜಾರಿ ಚಿತ್ರಾಪು, ದಿನೇಶ್ ಶೆಟ್ಟಿ, ವಕೀಲ ರವೀಶ್ ಕಾಮತ್, ಅಬ್ದುಲ್ ರಜಾಕ್, ಜಯ ಕುಮಾರ್ ಕುಬೆವೂರು, ಜಯರಾಮ್ ಬಿ.ಎಸ್. ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರು ಸಭಿಕರನ್ನು ಸ್ವಾಗತಿಸಿದರು. ದಿನೇಶ್ ಶೆಟ್ಟಿ ಅವರು ವಂದನಾರ್ಪಣೆ ಮಾಡಿದರು. ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸುಮಾರು 33 ವರ್ಷಗಳಿಂದ ದೈವ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಹಳೆಯಂಗಡಿಯ ಮೋಹನ್ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಪತ್ರಿಕೆ ಈ ಗೌರವಾರ್ಪಣೆಯನ್ನು ಮಾಡಿದೆ.
Leave a Reply