Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬ್ರಹ್ಮಾವರದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

“ಸಾಕ್ಷರತೆ ಕೇವಲ ಓದು ಬರಹ, ಸುಲಭ ಲೆಕ್ಕಾಚಾರದಲ್ಲಿ ಮಾತ್ರ ಅಲ್ಲ, ಬದಲಾಗಿ ಮುಂದುವರಿದ ಪರಿಸ್ಥಿತಿಯಲ್ಲಿ ಎಐ ತಂತ್ರಜ್ಞಾನವನ್ನು ತಿಳಿದುಕೊಳ್ಳುವುದು, ಶಿಕ್ಷಕರು ಆನ್ಲೈನ್ ಕೆಲಸಗಳನ್ನು ಕಲಿಯುವುದು, ತಂತ್ರಜ್ಞಾನ ಬಳಕೆಯನ್ನ ಕಲಿಯುವುದು ಇವೆಲ್ಲವೂ ಕೂಡ ಒಂದು ರೀತಿಯಲ್ಲಿ ಸಾಕ್ಷರತೆ ಇದ್ದ ಹಾಗೆಯೇ. ಬ್ರಹ್ಮಾವರ ಶೈಕ್ಷಣಿಕ ವಲಯಕ್ಕೆ ಸಂಬಂಧಿಸಿದಂತೆ ಸುಮಾರು 25 ಗ್ರಾಮ ಪಂಚಾಯಿತಿಗಳು ಈಗಾಗಲೇ ಸಂಪೂರ್ಣ ಸಾಕ್ಷರತಾ ಗ್ರಾಮ ಪಂಚಾಯತ್ ಎಂದು ಘೋಷಣೆಯಾಗಿದ್ದು ,ಇನ್ನು ಕೆಲವೇ ಕೆಲವು ಪಂಚಾಯತಿಗಳಲ್ಲಿ ಸಾವಿರ ಗ್ರಾಮ ಪಂಚಾಯತ್  ಸಾಕ್ಷರತಾ ಕಾರ್ಯಕ್ರಮ ಜಾರಿಯಲ್ಲಿರುತ್ತದೆ.

ಈ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ನಮ್ಮ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕೊಡುಗೆಯನ್ನು ಶ್ಲಾಘಿಸಲೇಬೇಕು  ” ಎಂದು ಶ್ರೀಮತಿ ಶಬಾನ ಅಂಜುಮ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮಾವರ ಇವರು ತಿಳಿಸಿದರು.
ಇವರು ದಿನಾಂಕ : 8. 9. 2025 ರಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ ಇಲ್ಲಿ ನಡೆದ ತಾಲೂಕು ಮಟ್ಟದ *ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ* ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕಳೆದ ಒಂದು ವಾರದಿಂದ ಅಂತಾರಾಷ್ಟ್ರೀಯ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿ ಮತ್ತು ಶಾಲೆಗಳಲ್ಲಿ ಸಾಕ್ಷರತೆಯ ಮಹತ್ವವನ್ನು ಸಾರುವಂತಹ ಘೋಷ ವಾಕ್ಯಗಳ ರಚನೆ, ಚಿತ್ರಕಲೆ, ಪ್ರಬಂಧ, ಭಾಷಣ, ನಾಟಕ, ಬೀದಿ ನಾಟಕ, ಜಾಥಾ, ಅನಕ್ಷರಸ್ಥರು ಮತ್ತು ನವ ಸಾಕ್ಷರರೊಂದಿಗೆ ಸೆಲ್ಫಿ ಇತ್ಯಾದಿ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿ ಸೋಮವಾರ ( 08/09/2025) ದಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ತಾಲೂಕು ಹಂತದ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಿಂಕ್ ಡಾಕ್ಯೂಮೆಂಟ್ ಸಾಕ್ಷರತಾ ಕಾರ್ಯಕ್ರಮದ ಫಲಾನುಭವಿಯಾಗಿ ನವ ಸಾಕ್ಷರರಾಗಿ ಹೊರಹೊಮ್ಮಿದ ಸುಮಾರು 68 ವರ್ಷದ ದೂಪದ ಕಟ್ಟೆಯ ಅಪ್ಪ  ಇವರನ್ನು ಸಾಕ್ಷರತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಇವರು ತೋರಿದ ಆಸಕ್ತಿ ಹಾಗೂ ಇನ್ನೊಬ್ಬರಿಗೆ ಸಾಕ್ಷರರಾಗಲು ನೀಡಿದ ಸಂದೇಶಕ್ಕಾಗಿ ಸನ್ಮಾನಿಸಿ ಸದರಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. 

ಸಾಕ್ಷರತಾ ಪ್ರಮಾಣ ವಚನವನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲರಿಗೂ ಬೋಧಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಸುರೇಶ್ ಕುಂದರ್, ಎಲ್ಲಾ ಇಸಿಓ, ಬಿ ಆರ್ ಪಿ ಹಾಗೂ ಸಿ ಆರ್ ಪಿ ಗಳು ಉಪಸ್ಥಿತರಿದ್ದರು. ಹಂಗಾರಕಟ್ಟೆ ಕ್ಲಸ್ಟರ್ ಸಿಆರ್‌ಪಿ ಶ್ರೀಮತಿ ಮಾಲಿನಿ ಎಂ ಪಿ ಇವರು ಸಾಕ್ಷರತ ಗೀತೆಯನ್ನು ಹಾಡಿದರು.ಸಾಕ್ಷರತಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಉದಯ್ ಕೋಟ  ಇವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ ಆರ್ ಪಿ ಶಾಂತ ಧನ್ಯವಾದ ಸಮರ್ಪಣೆಗೈದರು.

Leave a Reply

Your email address will not be published. Required fields are marked *