
“ಯಕ್ಷಗಾನ ಎಂಬುದು ಮನೋಲ್ಲಾಸವನ್ನು ಹೆಚ್ಚಿಸುವ ಕಲೆ. ಜೀವನದಲ್ಲಿ ಮಾನಸಿಕವಾಗಿ ಕುಗ್ಗಿದ ಮನಸ್ಸುಗಳಿಗೆ ಯಕ್ಷಗಾನವು ಔಷಧೋಪಚಾರದಂತೆ. ಪರಂಪರೆಯ ಯಕ್ಷಗಾನದ ಶಾಸ್ತ್ರೀಯತೆಯನ್ನು ಉಳಿಸಿ ಬೆಳೆಸುವಲ್ಲಿ ಮಕ್ಕಳ ಯಕ್ಷಗಾನದ ಪ್ರದರ್ಶನಗಳು ಹೆಚ್ಚು ಫಲಪ್ರದ. ಮಕ್ಕಳ ಮನಸ್ಸು ಕಲ್ಮಶವಿರದ ಶುದ್ಧ ಮನಸ್ಸು. ಹಾಗಾಗಿ ಮಕ್ಕಳ ಪ್ರದರ್ಶನಗಳಲ್ಲಿ ಯಾವುದೇ ಅಪಸವ್ಯಗಳು ಕಾಣಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಯಕ್ಷಗಾನವು ವಾಣಿಜ್ಯೀಕರಣವಾದಾಗ ಅದರ ಮೂಲ ಸ್ವರೂಪಕ್ಕೆ ಧಕ್ಕೆ ಬಂದಿದೆ. ಕಲಾವಿದರ ವೈಯಕ್ತಿಕ ಮಾತುಕತೆಗಳೇ ರಂಗದ ಸಂಭಾಷಣೆಗಳಾಗಿ ಮೂಡಿಬರುತ್ತಿವೆ. ಇಂಥವುಗಳಿಗೆ ಕಡಿವಾಣ ಹಾಕಬೇಕು.
ಯುವಜನತೆ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿ ಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮಕ್ಕಳು ಯಕ್ಷಗಾನದಲ್ಲಿ ತೊಡಗಿಸಿ ಕೊಂಡಾಗ ಅವರಲ್ಲಿ ಉತ್ತಮ ಸಂಸ್ಕಾರ ಮೂಡುವುದಕ್ಕೆ ಸಾಧ್ಯ. ಉಡುಪ ಮತ್ತು ಹಂದೆಯವರಿಂದ ಸ್ಥಾಪಿಸಲ್ಪಟ್ಟ ಸಾಲಿಗ್ರಾಮ ಮಕ್ಕಳ ಮೇಳವು ಚಾರಿತ್ರಿಕ ದಾಖಲೆಯೊಂದಿಗೆ ಐವತ್ತು ವರ್ಷಗಳ ದಿಗ್ವಿಜಯವನ್ನು ಸಾಧಿಸಿರುವುದು ಅಭಿನಂದನೀಯ. ಈ ಮೇಳದ ಕೀರ್ತಿ ಇನ್ನಷ್ಟು ಹೆಚ್ಚಲಿ” ಎಂದು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವದಿಸಿದರು.
ಅಕ್ಟೋಬರ್19 ರ ಆದಿತ್ಯವಾರ ಕೋಟದ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದ ಮಕ್ಕಳ ಮೇಳದ 50ರ ಸಂಭ್ರಮದ ಸುವರ್ಣ ಪರ್ವ ಸಮಾರೋಪ ಸಮಾರಂಭವನ್ನು ಚಂಡೆ ನುಡಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶ್ಯಾಮ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಬಹುಶ್ರುತ ವಿದ್ವಾಂಸರು ಡಾ. ಎಂ ಪ್ರಭಾಕರ ಜೋಶಿ, ಗೀತಾನಂದ ಪೌಂಡೇಶನ್ ಪ್ರವರ್ತಕರಾಗಿರುವ ಆನಂದ ಸಿ. ಕುಂದರ್, ವಿವೇಕ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿರುವ ಪ್ರಭಾಕರ ಮಯ್ಯ ಭಾಗವಹಿಸಿದರು. ಸ್ಥಾಪಕ ನಿರ್ದೇಶಕರಾದ ಎಚ್ ಶ್ರೀಧರ ಹಂದೆ, ಮಕ್ಕಳ ಮೇಳದ ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ ಉಪಸ್ಥಿತರಿದ್ದರು.

ಯಕ್ಷಗಾನ ಶಿಕ್ಷಕರಾಗಿರುವ ಚೇರ್ಕಾಡಿ ಮಂಜುನಾಥ್ ಪ್ರಭು, ಎನ್. ಉದಯಕುಮಾರ ಮಧ್ಯಸ್ಥ, ಹೆಮ್ಮಾಡಿ ಪ್ರಭಾಕರ್ ಆಚಾರ್ಯ ಇವರುಗಳಿಗೆ ಸುವರ್ಣ ಪರ್ವ ಗೌರವ ಪುರಸ್ಕಾರವನ್ನು ಪ್ರಧಾನಿಸಲಾಯಿತು. ಅಂತೆಯೇ ಮಕ್ಕಳ ಮೇಳದಲ್ಲಿ ಪ್ರಾಕ್ತನ ಕಲಾವಿದರಾಗಿದ್ದು, ಇದೀಗ ಯಕ್ಷಗಾನ ಶಿಕ್ಷಕರಾಗಿ ಗುರುತಿಸಿಕೊಂಡ ಬೆಂಗಳೂರಿನ ಮನೋಜ್ ಭಟ್ ಹಾಗೂ ನವೀನ್ ಮಣೂರ್ ಅವರಿಗೆ ಸುವರ್ಣ ಯುವ ಪುರಸ್ಕಾರವನ್ನು ನೀಡಲಾಯಿತು.
ಮಕ್ಕಳ ಮೇಳದ ಕಾರ್ಯಾಧ್ಯಕ್ಷ ಕೆ.ಮಹೇಶ್ ಉಡುಪ ಸ್ವಾಗತಿಸಿದರು. ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕುಮಾರಿ ಕಾವ್ಯ ಪ್ರಾರ್ಥನೆಗೈದರು. ಮಾಧುರಿ ಶ್ರೀರಾಮ್, ವಿನಿತ ಹಂದೆ ಅತಿಥಿಗಳನ್ನು ಗೌರವಿಸಿದರು. ಪ್ರಾಕ್ತನ ಕಲಾವಿದ ರಾಘವೇಂದ್ರ ನಾಯಿರಿ ವಂದಿಸಿದರು. ಪ್ರಣೂತ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಮೇಳದ ಪ್ರಾಕ್ತನ ವಿದ್ಯಾರ್ಥಿಗಳಿಂದ ತಾಮ್ರಧ್ವಜ ಕಾಳಗ ಹಾಗೂ ಅತಿಥಿ ಕಲಾವಿದರಿಂದ ಸುಧನ್ವ ಮೋಕ್ಷ ಯಕ್ಷಗಾನ ಪ್ರಸಂಗದ ಪ್ರದರ್ಶನ ಗೊಂಡಿತು.
Leave a Reply