
ಬರಹ: ಡಿ.ಕೆ.ಅಣ್ಣಪ್ಪಯ್ಯ, ನಿವೃತ್ತ ಶಿಕ್ಷಕರು, ಖಾರ್ವಿಕೇರಿ ರಸ್ತೆ., ಕುಂದಾಪುರ.
ಇದು ಯುಗಾಂತರಗಳ ಕಥೆ. ಲೋಕಗಳ ಒಡೆತನಕ್ಕಾಗಿ ದೇವತೆಗಳಿಗೂ ದೈತ್ಯರಿಗೂ (ರಾಕ್ಷಸ) ಯುದ್ಧಗಳಾಗುತ್ತಿತ್ತು. ಒಮ್ಮೆ ದೇವತೆಗಳು ಗೆದ್ದರೆ ಮತ್ತೊಮ್ಮೆ ದೈತ್ಯರಿಗೆ ಜಯ. ಹೀಗೆ ಅವರಲ್ಲಿ ವೈರ ಬೆಳೆದಿತ್ತು. ಪ್ರಜೆಗಳಿಗೆ ನೆಮ್ಮದಿ ಇರಲಿಲ್ಲ.
ತ್ರೇತಾಯುಗದಲ್ಲಿ ಒಂದು ದೊಡ್ಡ ಯುದ್ಧ ನಡೆದು ಅದರಲ್ಲಿ ದೈತ್ಯರಾದ ಹಿರಣ್ಯಕಶಿಪು ಮಡಿದ. ಅವನ ಮರಣಾನಂತರ ಮಗ ಪ್ರಹ್ಲಾದನು ಭೂ ಮಂಡಲದ ದೊರೆಯಾದನು. ಅವನ ಮಗ ವಿರೋಚನ, ಪತ್ನಿ ದೇವಾಂಬೆ. ಇವರ ಪುತ್ರನೇ ಬಲಿ.
ಬಲಿ ತನ್ನ ಅಜ್ಜನಿಂದ ಸಕಲ ಸದ್ಗುಣ, ವೇದ ವಿದ್ಯೆ, ಯುದ್ಧ ವಿದ್ಯೆ ಪಡೆದು ದೈತ್ಯವೀರರೊಳಗೆ ಅಗ್ರಗಣ್ಯನಾಗಿ ‘ಬಲಿ’ ಎಂಬ ಹೆಸರಿಗೆ ತಕ್ಕಂತೆ ಬಲಶಾಲಿಯಾದನು. ಋಷಿ ಕನ್ಯ ” ವಿಂದ್ಯಾವಳಿ” ಯೊಡನೆ. ವಿವಾಹವಾಗಿ ಯುವರಾಜನಾಗಿ ಅಜ್ಜನಿಂದ ನೇಮಿಸಲ್ಪಟ್ಟನು.

ದೇವತೆಗಳಿಂದ ಸದಾ ವೈರ ಸಾಧಿಸುತ್ತಿರುವುದರಿಂದ ದೈತ್ಯರು ಭಯಗ್ರಸ್ಥರಾಗಿದ್ದರು. ಇದರ ಪರಿಹಾರಕ್ಕಾಗಿ ದೇವತೆಗಳಿಗೆ ಸಮನಾದ ಯೋಗ್ಯತೆಗಳಿಸುವುದು, ಅದಕ್ಕಾಗಿ ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ವರ ಪಡೆಯುವುದು, ಕಠಿಣ ತಪಸ್ಸನ್ನು ಮಾಡಿ ಇಂದ್ರತ್ವವೂ, ಅಮರತ್ವವೂ ಲಭಿಸುವಂತ ವರವನ್ನು ಬ್ರಹ್ಮನಿಂದ ಪಡೆದು ಬಂದು ಅಜ್ಜನಿಂದ ರಾಜ್ಯಾಭಿಷೇಕ ಪಡೆದನು. ರಾಜ್ಯಾಭಿಷೇಕಕ್ಕೆ ಬಾರದೇ ಇದ್ದವರು ಎಂದರೆ ದೇವತೆಗಳು ಮಾತ್ರ. ಸ್ವರ್ಗದ ಒಡೆಯ ಇಂದ್ರನು ಬಲಿಯ ಪರಾಕ್ರಮ ಕೇಳಿ ಭಯ ಹಾಗೂ ಚಿಂತೆಗೆ ಒಳಗಾಗಿದ್ದ.
ರಾಜನಾದ ಮೇಲೆ ಬಲಿ ಮಹಾರಾಜನು ದಿಗ್ವಿಜಯಕ್ಕೆ ಹೊರಟು ಭೂ ಮಂಡಲವನ್ನು ಗೆದ್ದು ಸಾಮ್ರಾಟನಾದ. ಬಲಿ ಚಕ್ರವರ್ತಿಯ ಗೆಲುವಿಗೆ ಗುರುಗಳಾದ ಶುಕ್ರಾಚಾರ್ಯರ ಮಾರ್ಗದರ್ಶನವೇ ಕಾರಣ. ಅದಕ್ಕಾಗಿ ತಾನು ತಂದಿರುವ ಐಶ್ವರ್ಯವನ್ನು ದಕ್ಷಿಣೆಯಾಗಿ ಸಮರ್ಪಿಸಲು ನಿರ್ಧರಿಸಿದ. ಗುರುಗಳು ಅದನ್ನು ಪ್ರಜೆಗಳಿಗೆ ವಿನಿಯೋಗಿಸು, ಅದರ ಬದಲು ನಾನು ಅಪೇಕ್ಷಿಸುವ ಎರಡು ಗುರು ದಕ್ಷಿಣೆ ನೀನು ನೀಡಬೇಕು ಎಂದರು ಅದಕ್ಕೆ ಅವನು ಒಪ್ಪಿದನು. ಅದೇನೆಂದರೆ
ಅ) ದೈತ್ಯರಲ್ಲಿ ಧರ್ಮವನ್ನು ನೆಲೆಗೊಳಿಸು.
ಆ) ಲೋಕದ ಬಡತನವನ್ನು ನೀಗಲು ದಾನ ಗುಣವನ್ನು ಬೆಳೆಸಿಕೋ.

ಗುರುವಿನ ವಾಕ್ಯದಂತೆ ನಡೆದ ಬಲಿ ಚಕ್ರವರ್ತಿ ” ವಿಶ್ವಜಿದ್ ಯಜ್ಞ ” ಆರಂಭಿಸಿದ. ಇಂತಹ ಯಜ್ಞ ದೈತ್ಯರು ಎಂದೂ ಮಾಡಿರಲಿಲ್ಲ. ಬಲಿ ಚಕ್ರವರ್ತಿ ಹಿಂಸೆ, ಅಧರ್ಮಕ್ಕೆ ಇಲ್ಲಿ ಸ್ಥಾನವಿಲ್ಲದಂತೆ ಹಾಗೂ ಬಡವರ ಕಷ್ಟಕ್ಕೆ ಸ್ಪಂದಿಸುತ್ತಾ, ಪ್ರಜೆಗಳ ಸುಖ ಸಂತೋಷಕ್ಕಾಗಿ ಹೋರಾಡಿದ. ಸ್ವತಹ ರಾಜನೆ ರಾಜ್ಯದ ಮೂಲೆ ಮೂಲೆಗಳಿಗೆ ಸಂಚರಿಸಿ ನೋಡಿಕೊಳ್ಳುತ್ತಿದ್ದನು. ಧರ್ಮಾತ್ಮ, ಸತ್ಯವಂತ, ದಾನವೀರ ಎಂಬ ಕೀರ್ತಿ ಪಡೆದ. ಭೂಮಿಯನ್ನು ಸ್ವರ್ಗವನ್ನಾಗಿ ಮಾಡಲು ಅವತರಿಸಿದ ದೇವತೆ ಎಂದು ಎಲ್ಲರ ಬಾಯಿಂದ ಆಲಿಸಿದ. ಭೋಗ ಭಾಗ್ಯಗಳಿಗಾಗಿ ದೇವತೆಗಳನ್ನು ಬೇಡುವವರೇ ಇಲ್ಲವಾಯಿತು. ಅದಕ್ಕಾಗಿ ಪ್ರಜೆಗಳು ಬಲಿಯ ವಿರುದ್ಧ ದಂಗೆ ಏಳುವಂತೆ ಮಾಡಲು “ಕಲಿ ‘ಯನ್ನು ಭೂ ಲೋಕಕ್ಕೆ ಕಳುಹಿಸಿದರು ದೇವತೆಗಳು. ಮಳೆ, ಬೆಳೆ ಇಲ್ಲದೇ ಜನರು ದಂಗೆಯೇಳುವುದೇ ಇದರ ಉದ್ದೇಶ.
ಬಲಿಯ ಆಸ್ಥಾನದಲ್ಲಿ ಸ್ವರ್ಗವನ್ನು ಗೆಲ್ಲುವ ಚಿಂತನೆ ನಡೆದು ಕಾರ್ಯೋನ್ಮುಖರಾಗಿ ಜಯಶಾಲಿಗಳಾದರು. ಹಲವು ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ನ್ಯಾಯ, ಧರ್ಮ, ಸತ್ಯಸಂಧನಾದ ‘ಬಲಿ’ ಸ್ವರ್ಗದ ಅಧಿಪತಿಯಾದ. ಲೋಕದ ಒಡೆಯನಾದ ‘ಬಲಿ’,
ಗುರುಗಳಾದ ಶುಕ್ರಾಚಾರ್ಯರು ” ಬಲಿ ಚಕ್ರವರ್ತಿ ” ಯಲ್ಲಿ ನೂರು ಅಶ್ವಮೇಧ ಯಾಗ ಮಾಡಿ ಗೆದ್ದ ಮೂರು ಲೋಕವನ್ನು ಶಾಶ್ವತವಾಗಿ ಉಳಿಸಿಕೊಳ್ಳು ಎನ್ನುವ ಸಲಹೆಯನ್ನು ನೀಡಿದರು. ನರ್ಮದಾ ನದಿಯ ಉತ್ತರ ದಿಕ್ಕಿನ ” ಭೈಗು ಕಚ್ಚ ” ಕ್ಷೇತ್ರವನ್ನು ಆಯ್ಕೆ ಮಾಡಿ. ಪತ್ನಿಯೊಂದಿಗೆ ಯಜ್ಞ ದೀಕ್ಷೆಯನ್ನು ಪಡೆದನು.
ರಾಜ್ಯ ಕಳೆದುಕೊಂಡ ಇಂದ್ರ. ತಾಯಿ ಅದಿತಿಯಲ್ಲಿ ನಡೆದ ವಿಷಯ ಅರುಹಿದ. ತಾಯಿ ಅದಿತಿ, ತಂದೆ ಕಶ್ಯಪರೂ ಸೇರಿ ಬ್ರಹ್ಮನಲ್ಲಿ ಬಂದರು. ಬ್ರಹ್ಮನು ಅವರಿಗೆ ವಿಷ್ಣುವಿನ ಮೊರೆ ಹೋಗಲು ತಿಳಿಸಿದ. ಋಷಿ ದಂಪತಿಗಳಾದ ‘ ಅದಿತಿ-ಕಶ್ಯಪರು ‘ ತಪಸ್ಸನ್ನು ಆಚರಿಸಿ ವಿಷ್ಣುವನ್ನು ಒಲಿಸಿಕೊಂಡರು. ವಿಷ್ಣು. ನೀನು ನನ್ನ ಗರ್ಭದಲ್ಲಿ ಜನಿಸಿ ಬಲಿಯನ್ನು ನಿಗ್ರಹಿಸಬೇಕು ಎಂದು ವರವನ್ನು ಕೇಳಿದಳು. ಅದಕ್ಕೆ ವಿಷ್ಣುವು ಒಪ್ಪಿದನು. ಬಲಿಯನ್ನು ಹಿಂದೆ ರಾಕ್ಷಸರನ್ನು ಸಂಹರಿಸಿದಂತೆ ಸಂಹರಿಸಲು ಸಾಧ್ಯವಿಲ್ಲ. ಅವನು ಸತ್ಯಸಂಧ, ಧರ್ಮಾತ್ಮ, ದಾನ ಧರ್ಮದಲ್ಲಿ ಹೆಸರುವಾಸಿ, ಅದಕ್ಕಾಗಿ ಬೇರೊಂದು ಉಪಾಯದ ಮಾರ್ಗ ಅನುಸರಿಸಬೇಕಾಗಿದೆ ಎಂದೆ.
ಬಲಿಯ ಅಶ್ವಮೇಧ ಯಾಗ ತೊಂಭತ್ತೊಂಭತ್ತು ಮುಗಿದಿದೆ. ಇನ್ನು ಒಂದೇ ಒಂದು ಆದಲ್ಲಿ ಅವನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ದೇವತೆಗಳು ಅರಿತಿದ್ದರು. ಅದೇ ಸಮಯದಲ್ಲಿ ಭೂಕಂಪ, ಪ್ರವಾಹ, ಬೆಂಕಿ ಅನಾಹುತಗಳು ಆರಂಭವಾದವು. ಇದಕ್ಕೆ ಕಾರಣ ತಿಳಿಯಲು ಬಲಿ ತನ್ನ ಅಜ್ಜ ಪ್ರಹ್ಲಾದರಲ್ಲಿಗೆ ಧಾವಿಸಿದನು. ದಿವ್ಯಜ್ಞಾನಿಯಾದ ಪ್ರಹ್ಲಾದನಿಗೆ ವಿಷ್ಣು ಅವತರಿಸಿದ್ದಾನೆ ಎನ್ನುವ ವಿಷಯ ತಿಳಿಯುತ್ತದೆ. ಬಲಿಯೊಡನೆ ಈ ವಿಷಯ ತಿಳಿಸಿದಾಗ, ಆ ಒಬ್ಬ ವಿಷ್ಣು ನಮ್ಮನ್ನು ಏನು ಮಾಡಬಲ್ಲನು ? ಎಂದನು. ಹರಿಯ ಭಕ್ತನಾದ ಪ್ರಹ್ಲಾದನಿಗೆ ಬಲಿಯ ಮಾತಿನಿಂದ ಕೋಪ ಬಂದು ನೀನು ಶೀಘ್ರದಲ್ಲಿ ” ರಾಜ್ಯ ಭ್ರಷ್ಟನಾಗುವೆ” ಎಂದು ಶಾಪ ಹಾಕಿದನು. ಆಗ ಬಲಿಗೆ ತನ್ನ ತಪ್ಪಿನ ಅರಿವಾಯಿತು. ಅಜ್ಜನಾದ ಪ್ರಹ್ಲಾದರಲ್ಲಿ ಪರಿ ಪರಿಯಾಗಿ ವಿನಂತಿಸಿಕೊಂಡ ಮಗೂ ಸಿಟ್ಟಿನಲ್ಲಿ ಏನೋ ಆಡಿಬಿಟ್ಟೆನಪ್ಪ, ಹಣೆಬರಹವನ್ನು ತಪ್ಪಿಸ ಬಲ್ಲವರು ಯಾರು ? ವಿಷಾದಿಸಬೇಡ, ಯಜ್ಞ ಪೂರೈಸು, ನಿನ್ನ ಕೀರ್ತಿ ಚಿರಾಯುವಾಗಲಿ ಎಂದು ಹರಸಿದರು.
ಶುಕ್ರಾಚಾರ್ಯರು ಮುಂದೆ ನಿಂತು ನೂರನೇ ಅಶ್ವಮೇಧ ಯಜ್ಞದ ಹೊಣೆ ವಹಿಸಿದ್ದರು. ಮಂಗಳ ವಾದ್ಯ, ರಾಶಿರಾಶಿ ಮುತ್ತು, ರತ್ನ, ಗೋವು, ಒಡವೆ ಮತ್ತು ವಸ್ತ್ರದಾನ ಮಾಡಲಾಗುತ್ತಿತ್ತು. ಪತ್ನಿ ವಿಂದ್ಯಾವಳಿಯೊಡನೆ ಬಲಿ ಚಕ್ರವರ್ತಿ ಹೋಮದ ಕಾರ್ಯದಲ್ಲಿ ನಿರತನಾಗಿದ್ದನು. ಆಗ ಗುರುಗಳಾದ ಶುಕ್ರಾಚಾರ್ಯರು ಬಲಿಯಲ್ಲಿ ಕಿವಿ ಮಾತು ಹೇಳಿದರು. ಇಂದು ಯಜ್ಞದ ಕೊನೆಯ ದಿನ. ದೇವತೆಗಳು ಏನಾದರೂ ಮೋಸವನ್ನು ಮಾಡಿದರೂ ಮಾಡಬಹುದು. ವಿಷ್ಣು ಬಂದು ಏನನ್ನಾದರೂ ದಾನ ಕೇಳಿದರೆ ಉಪಾಯದಿಂದ ನಿರಾಕರಿಸು ಎಂದು ಸಲಹೆ ನೀಡಿದರು. ಅದಕ್ಕೆ ಬಲಿಯು ದಾನ ಮಾಡುವ ಕಾರ್ಯದಲ್ಲಿ ನೀವು ವಿಘ್ನವನ್ನು ಒಡ್ಡಕೂಡದೆಂದು ಕೋರುತ್ತೇನೆ ಎಂದನು.
ಹೀಗೆ ಮಾತನಾಡುವಾಗಲೇ ಸುಮಾರು 8 ವರ್ಷ ವಯಸ್ಸಿನ ಪುಟ್ಟ ವಟುವೊಬ್ಬ ಯಜ್ಞಶಾಲೆ ಪ್ರವೇಶಿಸಿದ. ಅವನ ಮುಖ ಕಾಂತಿಯುತವಾಗಿತ್ತು, ನೆಗೆ ಮುಖ, ಜಡೆ, ಕೊಡೆ, ನಾರು ಬಟ್ಟೆ, ಯಜ್ಞೆಪವಿತ ದಂಡ ಕಮಂಡಲ, ಕೃಷ್ಣಾದನೆ, ನೊಸಲಲ್ಲಿ ಚಂದನ ತಿಲಕ! ವಿದ್ಯೆಗಳ ರಾಶಿಯೇ ಬಾಲಕನ ರೂಪ ತಳೆದಂತೆ ನಡೆಯುತ್ತಿರುವ ಆತನು ಬಲಿಯ ಕಡೆಗೆ ಬರುತ್ತಾನೆ. ಶುಭವಾಗಲಿ ಎಂದು ಹರಸುತ್ತಾನೆ.
ಬಾಲವಟು(ವಿಷ್ಣು, ರೂಪ) ಬಲಿ ಚಕ್ರವರ್ತಿಗೆ ಹೀಗೆಂದು ಹೇಳುತ್ತಾನೆ. ಇದು ಅದ್ಭುತವಾದ ಯಜ್ಞ, ಇಲ್ಲಿ ಸೇರಿರುವ ಲಕ್ಷೇಪ ಲಕ್ಷ ಜನ, ಮುತ್ತು ರತ್ನಗಳ ದಾನ, ವೇದ ಘೋಷ ಇದರಿಂದ ನೀನು ಎಂತಹ ” ಧರ್ಮಾತ್ಮ” ನೆಂಬುದು ತಿಳಿಯುತ್ತದೆ. ಕಾರ್ಯಕ್ಕೆ ತಕ್ಕಂತೆ ಶ್ರೇಷ್ಠವಾದ ದಾನವನ್ನು ನೀಡಬೇಕು ಎನ್ನುತ್ತಾನೆ. ಅದಕ್ಕೆ ಬಲಿ ಚಕ್ರವರ್ತಿ ಏನು ಬೇಕಾದರೂ ಅಥವಾ ಎಲ್ಲವನ್ನು ಬೇಕಾದರೆ ಬೇಡಿಕೋ ಕೊಡುತ್ತೇನೆ ಎಂದು ಹೇಳುತ್ತಾನೆ. ವಟು ತನ್ನ ಪರಿಚಯ ಹೇಳುತ್ತಾ ಕಶ್ಯಪ ಮುನಿಯ ಪುತ್ರ ನಾನು. ನನ್ನ ಹೆಸರು ‘ವಾಮನ ಮೂರ್ತಿ’. ನಾನು ಬ್ರಹ್ಮಾಚಾರಿ, ನನಗೆ ರಾಜ್ಯ, ರತ್ನ, ಧನಗಳ ಅಗತ್ಯವಿಲ್ಲ. ನಾನು ಇದೀಗ ಉಪನಯನವಾಗಿ ಬಂದಿರುವೆ. ನನ್ನ ಗುರುಗಳಾದ ಭಾರದ್ವಾಜನ * ಅಗ್ನಿಹೋತ್ರಕ್ಕಾಗಿ ಭೂಮಿ ಬೇಕಾಗಿದೆ. ನೀನು ನನ್ನ ಶರೀರಕ್ಕೆ ಅನುಗುಣವಾಗಿ ” ಮೂರು ಹೆಜ್ಜೆ” ಗಳಷ್ಟು ಭೂಮಿಯನ್ನು ದಾನವಾಗಿ ಕೊಡು ಸಾಕು ಎಂದನು. ಬಲಿ ಚಕ್ರವರ್ತಿ ದಾನವನ್ನು ಧಾರೆ ಎರೆದು ಕೊಡಲು ಸಿದ್ದನಾದ. ಗುರುಗಳು ಕೊಡಬೇಡವೆಂದರೂ ಒಪ್ಪದೇ ದಾನಕ್ಕೆ ಸಿದ್ಧನಾದ.
ವಾಮನ ಮೂರ್ತಿಯ ಶರೀರ ಬೆಳೆಯುತ್ತಾ ಹೋಯಿತು. ತನ್ನ ಮೊದಲ ಹೆಜ್ಜೆಯಿಂದ ಭೂಮಿ, ಪಾತಾಳ ಲೋಕವನ್ನು ಅಳೆದನು. ಎರಡನೇ ಹೆಜ್ಜೆಗೆ ಸ್ವರ್ಗವನ್ನು ಆಳೆದನು. ಮೂರನೇ ಹೆಜ್ಜೆಗೆ ಭೂಮಿ ಇರಲಿಲ್ಲ. ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಕೇಳಿದನು. ಆಗ ಬಲಿ ತನ್ನ ತಲೆಯ ಮೇಲೆ ಇಟ್ಟು ಬಿಡು ಎಂದನು . ಬಲಿ ಚಕ್ರವರ್ತಿಯ ದಾನ ದೇವಾದಿ ದೇವತೆಗಳು, ದೈತ್ಯರು, ಪ್ರಜೆಗಳು ಕೊಂಡಾಡಿದರು. ಬಲಿ ಚಕ್ರವರ್ತಿಯ ಮಗ ಬಾಣ ವಾಮನ ಮೂರ್ತಿಯೊಂದಿಗೆ ಜಗಳವಾಡಿದ. ಆದರೆ ವಾಮನ. ಮೂರ್ತಿಯ ಮಾತಿಗೆ ಸೋತುಹೋದ.

ಭಕ್ತ ರಾಜನಾದ ಬಲಿ ಚಕ್ರವರ್ತಿಗೆ ಭೂದಾನ ಮಾಡಿದ್ದು ಕಾರ್ತಿಕ ಮಾಸದ ಶುದ್ಧ ಪಾಡ್ಯಮಿಯಂದು, ಅಶ್ವಯುಜ ಅಮವಾಸ್ಯೆಯ ದೀಪಾವಳಿಯ ಮರುದಿನದ ತಿಥಿ ” ಬಲಿ ಪಾಡ್ಯಮಿ “, ಇದು ಪವಿತ್ರವಾದ ಹಬ್ಬ, ವಾಮನ ಮೂರ್ತಿ ನಿನಗೆ ಪಾತಾಳ ಭೂಮಿಯ ಸುತ್ತಲ ಲೋಕವನ್ನು ಕೊಟ್ಟಿದ್ದೇನೆ. ವಿಷ್ಣು ಜನಾರ್ಧನ ರೂಪಿಯಾಗಿ ದುರ್ಗಾಪಾಲಕನಾಗಿ ಕಾವಲು ಕಾಯುತ್ತಾನೆ. ಒಂದು ವರ ಕೊಟ್ಟಿದ್ದೇನೆ. ಕೇಳಿಕೋ ಎಂದನು. ಅದರಂತೆ ಬಲಿ ಚಕ್ರವರ್ತಿ ರಾಜ್ಯದ ಪ್ರಜೆಗಳನ್ನು ಮರೆಯಲಾರೆ ಆದ್ದರಿಂದ ವರ್ಷಕ್ಕೊಮ್ಮೆಯಾದರೂ ನಾನು ಪ್ರಜೆಗಳ ಆನಂದವನ್ನು ನೋಡುವ ಹಾಗೆ ವರವನ್ನು ನೀಡು ಎಂದು ಕೇಳಿಕೊಂಡ. ‘ತಥಾಸ್ತು’ ಪ್ರತಿ ವರ್ಷವೂ ಮಾನವರು ಈ ಹಬ್ಬ ಆಚರಿಸುವರು. ಆ ದಿನ ಭೂಮಿಯು ಬಲಿ ರಾಜ್ಯವಾಗಿರುತ್ತದೆ ಎಂದನು.
ಪ್ರತಿ ವರ್ಷ ದೀಪಾವಳಿಯ ಮಾರನೇ ದಿನ ಬಲಿ ಪಾಡ್ಯ. ಅಂದು ಕೆಲವು ಕಡೆ ಬಲಿ ಚಕ್ರವರ್ತಿ ಹಾಗೂ ಬಲಿರಾಜನ ಗೃಹ ರಕ್ಷಕ ಜನಾರ್ಧನನು ಭೂಮಿಯ ಮೇಲೆ ಬಂದು ಪ್ರಜೆಗಳ ಸಂತೋಷದಲ್ಲಿ ಭಾಗಿಯಾಗುತ್ತಾನೆ ಎಂಬ ನಂಬಿಕೆ. ಅದಕ್ಕಾಗಿ ಮನೆ ಅಂಗಳದಲ್ಲಿ ಬಲೀಂದ್ರ ಮತ್ತು ಜೊತೆಗಾರ ಜನಾರ್ಧನನ ಮಣ್ಣಿನ ಅಥವಾ ಗೋಮಯದಿಂದ ಮೂರ್ತಿ ಸ್ಥಾಪನೆ ಮಾಡಿ ಪೂಜಿಸುತ್ತಾರೆ.
ಈ ಬಲೀಂದ್ರನಿಗೆ ಮೂರು ಪೂಜೆಯೊಂದಿಗೆ ಮಣ್ಣಿನಿಂದ ತಯಾರಿಸಿ ಸ್ಥಾಪಿಸುವ ಕ್ರಮ ಕೆಲವು ಕುಟುಂಬದಲ್ಲಿ ನಡೆದು ಬಂದಿದೆ.
ಈಗ ಈ ಪದ್ಧತಿಯನ್ನು ಕುಂದಾಪುರ ರಾಮಕ್ಷತ್ರಿಯ ವಂಶಸ್ಥರಾದ ಖಾರ್ವಿಕೇರಿ ರಸ್ತೆಯ ನಿವಾಸಿಗಳಾದ ಡಿ.ಕೆ. ಅಣ್ಣಪ್ಪಯ್ಯ ಮತ್ತು ಮುಕಾಂಬಿಕ ದಂಪತಿಗಳ ಮನೆಯಲ್ಲಿ ಪ್ರತಿ ವರ್ಷ ದೀಪಾವಳಿ ಹಬ್ಬದಂದು ಆಚರಿಸುತ್ತಾರೆ.
ಜೇಡಿ ಮಣ್ಣಿನಿಂದ ಮೂರ್ತಿ ತಯಾರಿ ಮಾಡುತ್ತಾರೆ.
ಚಿತ್ರದಲ್ಲಿ ತೋರಿಸಿದಂತೆ ಕಣ್ಣು ರಾಟಲಕಾಯಿ ಬೀಜ, ಬಣ್ಣ ಶೇಡಿ, ಕತ್ತಿ ಡಾಲು, ಹಾನೆ ಓಲೆ, ಹಲ್ಲು ಸೌತೆ ಬೀಜ, ಭತ್ತದ ಕೊಡೆ ಹೀಗೆ ತಯಾರಾದ ಮೂರ್ತಿ ಸ್ನಾನದ ಮಧ್ಯಾಹ್ನ ಬರುವ ಸೂಚನೆ. ಅಂಗಳದಲ್ಲಿ ಗುಂಬಳದ ಎಲೆಯ ಮೇಲೆ ಗೋಮಯ ಪೂಜೆ. ರಾತ್ರಿ ಮೂರ್ತಿ ಸ್ಥಾಪನೆ. ಪೂಜೆ, ಆರತಿ ” ಉಂತನ ” ಕಾಯಿಯ ಆರತಿ. 2ನೇ ದಿನ ಮದ್ಯಾಹ್ನ ನೆಲ್ಲಿಕಾಯಿ ಆರತಿ. ರಾತ್ರಿ ಹಿಟ್ಟಿನ ಆರತಿ. ನೈವೇದ್ಯವಾಗಿ ಅವಲಕ್ಕಿ, ಕಾಯಿ ಹಾಲು ಮತ್ತು ನೀರು ದೋಸೆ, ಹಿಟ್ಟಿನಿಂದ ಹುರಿದ ಉಂಡಲಗಾಯಿ. ಹೀಗೆ ಮೂರು ಪೂಜೆ ಪೂರೈಸಿ ಮಾರನೇ ದಿನ ಬೆಳಗಿನ ಜಾವ ಮೊಸರನ್ನ ಕಟ್ಟಿಕೊಂಡು ಪ್ರಯಾಣ ಸುತಲ ಲೋಕಕ್ಕೆ, ಮತ್ತೆ ಬರುವ ವರ್ಷ ಆಗಮನ. ಇದಲ್ಲದೆ ಗದ್ದೆಗೆ ದೀಪವನ್ನು ಇಟ್ಟು ಬಲಿಯನ್ನು ಕರೆಯುವ ಪದ್ಧತಿಯೂ ಇದೆ.

Leave a Reply