ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಭಜನಾ ಸಮಾವೇಶವು ಇದೇ ಬರುವ ಡಿಸೆಂಬರ್ 06 ಮತ್ತು 07, ರಂದು ಬೆಳಗ್ಗೆ 10.00 ರಿಂದ ಉಡುಪಿಯ ಎಂಜಿಎಂ ಕಾಲೇಜಿನ ಟಿ. ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣ, ಎಂ.ಜಿ.ಎಂ ಕಾಲೇಜು ಆವರಣ ನಡೆಯಲಿದೆ ಎಂದು ಸಂತ ಕವಿ ಕನಕದಾಸ ಅಧ್ಯಯನ ಕೇಂದ್ರ ಬೆಂಗಳೂರಿನ ಸದಸ್ಯ ಸಂಚಾಲಕರಾಗಿರುವ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರಾಧನೆಯ ಗಾಯನ ಕಲೆಗಳಲ್ಲಿ ಭಜನೆಗಳು ಬಹಳ ಮುಖ್ಯವಾದವು. ತತ್ವಪದಗಳು ಭಕ್ತಿಯ ಒಂದು ಮಾರ್ಗವಾಗಿದ್ದರೆ ಭಜನೆಗಳು ಮತ್ತೊಂದು ಮಾರ್ಗವಾಗಿದೆ. ಮೂಲದಾಟಿಯ ಭಜನೆಗಳು ಭಕ್ತ ಮತ್ತು ಭಗವಂತನ ನಡುವೆ ನೇರ ಮಾರ್ಗವನ್ನು ಕಲ್ಪಿಸುತ್ತವೆ. ಆರಾಧನೆ ಮತ್ತು ಆಚರಣೆಯ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ಈ ಭಜನೆಗಳು ಅಂತರಂಗ ಮತ್ತು ಬಹಿರಂಗ ಶುದ್ದಿಗಳ ಆಶಯಗಳನ್ನು ಒಳಗೊಂಡಿವೆ. ಇವುಗಳ ಜೊತೆಗೆ ದೇಸಿ ಸಂಸ್ಕೃತಿಯ ಸ್ವರೂಪವನ್ನು ಒಳಗೊಂಡಿರುವ ಈ ಭಜನೆಗಳು ಅನುಭಾವದ ತಾತ್ವಿಕ ನೆಲೆಗಟ್ಟನ್ನು ಒಳಗೊಂಡಿರುತ್ತವೆ. ದೇಸಿಯತೆ, ಪ್ರಾದೇಶಿಕತೆನ್ನೊಳಗೊಂಡಿರುವ ಇವುಗಳಲ್ಲಿ ಒಂದು ಜೀವನಾನುಭವ, ಬದುಕಿನ ಸ್ವರೂಪದ ಚಿಂತನೆ, ಬದುಕಿನ ಸಂಕೀರ್ಣತೆ, ಹುಟ್ಟು, ಸಾವು, ಕಷ್ಟ-ಸುಖ, ದುಃಖ ದುಮ್ಮಾನಗಳ ಸ್ವರೂಪವೂ ಅವುಗಳಲ್ಲಿರುತ್ತದೆ.
ಜನರ ಬದುಕಿನ ಸ್ವರೂಪವು ಭಜನೆಗಳಲ್ಲಿರುವುದರಿಂದ ಅದರಲ್ಲಿ ತಾನಾಗಿಯೇ ಸಾಮಾಜಿಕ ಚಿಂತನೆಗಳ ಸ್ವರೂಪವೂ ಅಡಕವಾಗಿವೆ. ಭಜನೆಗಳ ರಚನಾಶೈಲಿ, ಗೇಯತೆ, ಹಾಡುಗಾರಿಕೆಯನ್ನೊಳಗೊಂಡಿದ್ದು ಕುಣಿತವೂ ಇರುತ್ತದೆ. ಇದು ಆಯಾ ಪ್ರದೇಶವನ್ನು ಅವಲಂಬಿಸಿರುತ್ತದೆ. ಶಾಸ್ತ್ರೀಯ ಸಂಗೀತದ ಗಂಧ ಗಾಳಿ ಇಲ್ಲದವರೂ ಹಾಡಿಕೊಂಡು ಬಂದಿರುವ ಭಜನೆಗಳಲ್ಲಿ ಪಾರಂಪರಿಕ ಮೌಖಿಕ ಸಂಗೀತದ ಮೂಲಪಾಠವಿದೆ, ಭಾರತೀಯ ಸಂಗೀತದ ಪ್ರಾಥಮಿಕ ತಾಳ ರಾಗಗಳ ಜ್ಞಾನ ಇದೆ. ಪುರಾತನರಿಂದ ಭಾರತೀಯ ಸಂಸ್ಕೃತಿ ಮತ್ತು ಭಕ್ತಿಯು ಭಜನೆಗಳ ಮೂಲಕ ಸಂವಹನವಾಗುತ್ತ ಬಂದಿದೆ. ನಿತ್ಯ ಮನೆಗಳಲ್ಲಿ, ದೇವಾಲಯಗಳಲ್ಲಿ ಭಜನೆ ಮಾಡುವ ಮೂಲಕ ಮನುಷ್ಯ ಸಂಬಂಧ, ಮಾನವೀಯತೆ, ಭಾರತೀಯ ಅಸ್ಮಿತೆ ಉಳಿದಿದೆ, ಬೆಳೆದಿದೆ.
ಈ ಭಜನೆಗಳು ಮೇಲುನೋಟಕ್ಕೆ ಜಡ ಧಾರ್ಮಿಕ ಆಚರಣೆಯ ಪದಗಳಂತೆ ಕಂಡರೂ ಅದರ ಒಳಗೆ ಕ್ರಿಯಾಶೀಲವಾದ ಸಾಂಸ್ಕೃತಿಕ ವಿಚಾರಗಳು ಒಳಗೊಂಡಿರುತ್ತವೆ. ಅವುಗಳನ್ನು ಗುರುತಿಸಿ ಅಧ್ಯಯನ ವಿಶ್ಲೇಷಣೆ ಮಾಡಬೇಕಾಗಿರುತ್ತದೆ. ಇದರಿಂದಾಗಿ ಅವುಗಳ ಪ್ರದರ್ಶನ, ದಾಖಲೀಕರಣ ಆಗಬೇಕಾಗಿರುತ್ತದೆ. ಇದರ ಜೊತೆಗೆ ಈ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಸಂದರ್ಭದ ಅಗತ್ಯವಾಗಿದೆ. ಹೀಗಾಗಿ ಉತ್ತಮ ಸಾಂಸ್ಕೃತಿಕ ಪರಿಸರದ ನಿರ್ಮಾಣದ ಉದ್ದೇಶ ಹೊಂದಿರುವ ಈ ಭಜನಾಮೇಳದ ಉತ್ಸವವನ್ನು ಏರ್ಪಡಿಸುವ ಅಗತ್ಯತೆ ಜಾಗತೀಕರಣದ ಸಂದರ್ಭದಲ್ಲಿ ತುಂಬಾ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ತತ್ವಪದಗಳ ಸಮಾವೇಶ, ಶ್ರಮಣಧಾರೆಗಳ ಸಮಾವೇಶ, ಬುಡಕಟ್ಟು ಸಮಾವೇಶ, ಭಜನಾ ಸಮಾವೇಶಗಳನ್ನು ರಾಜ್ಯದಾದ್ಯಂತ ಏರ್ಪಡಿಸುತ್ತ ಬಂದಿದೆ.
ಪ್ರಸ್ತುತ, ಅಧ್ಯಯನ ಕೇಂದ್ರವು ಕನಕ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ 2025ರ ಡಿಸೆಂಬರ್ 06 ಮತ್ತು 07 ರಂದು “ಕರಾವಳಿ ಭಜನಾ ಸಮಾವೇಶ” ಎಂಬ ಎರಡು ದಿನಗಳ ಸಮಾವೇಶವನ್ನು ಆಯೋಜಿಸಿದೆ.
ಸಮಾವೇಶದಲ್ಲಿ ಮಹಾಲಕ್ಷ್ಮೀ ಮೊಗವೀರ ಭಜನಾ ಮಂಡಳಿ ಕೊಡವೂರು, ರಾಗ ರಂಜಿನಿ ತಂಡ ಕುಂಜಿಬೆಟ್ಟು ಉಡುಪಿ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಹೆಂಗವಳ್ಳಿ ಕುಂದಾಪುರ, ಜಿ.ಎಸ್.ಬಿ ಮಹಿಳಾ ಮಂಡಳಿ ಎಸ್. ಎಲ್. ವಿ . ಟಿ . ಉಡುಪಿ, ಶ್ರೀ ಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಿರಾಡಿ ಆವಸೆ ಬ್ರಹ್ಮಾವರ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬಾಳೆ ತೋಟ ಮೂಡು ಅಂಜಾರು ಹಿರಿಯಡ್ಕ, ಯಕ್ಷಿ ಕಲ್ಲುಕುಟಿಗ ಭಜನಾ ಮಂಡಳಿ ಕೋಟೇಶ್ವರ, ರಂಗಚಿನ್ನಾರಿಯ ಸ್ವರಚಿನ್ನಾರಿ ಭಜನಾ ಮಂಡಳಿ ಕಾಸರಗೋಡು, ಸರ್ವೇಶ್ವರೀ ಭಜನಾ ಮಂಡಳಿ ಹೊನ್ನಾವರ, ಬಾಲ ವಿಕಾಸ ಭಜನಾ ಮಂಡಳಿ ಹೊಸಬೆಟ್ಟು ಮಂಗಳೂರು, ಶ್ರೀ ವೀರಭದ್ರ ಗುರು ಮಾಚಿದೇವ ಭಜನಾ ಮಂಡಳಿ ಕಾರ್ಕಳ, ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮೂಡಹಡು ಸಾಸ್ತಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಕರಂದಾಡಿ ಕಾಪು ತಂಡ ಸೇರಿ ಒಟ್ಟು 13 ಭಜನಾ ತಂಡಗಳು ಭಜನೆಗಳನ್ನು ಹಾಡಲಿದ್ದಾರೆ. ಶ್ರೀ ರಮೇಶ್ ಕಲ್ಯಾಡಿ ಮತ್ತು ಶ್ರೀಮತಿ ಜ್ಯೋತಿ ದೇವಾಡಿಗ ಇವರು ಭಜನಾ ಗಾಯನದ ಪರಿಚಯ ಮಾಡಿಕೊಡಲಿದ್ದಾರೆ.
ದಿನಾಂಕ 06-12-2025ರಂದು ಬೆಳಗ್ಗೆ 10.00 ಗಂಟೆಗೆ ಡಾ. ಬಿ. ಎ ವಿವೇಕ ರೈ, ಹಿರಿಯ ವಿದ್ವಾಂಸರು, ವಿಶ್ರಾಂತ ಕುಲಪತಿಗಳು, ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಕಾ ತ ಚಿಕ್ಕಣ್ಣ, ಅಧ್ಯಕ್ಷರು, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಇವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಡಾ. ನಾರಾಯಣ ಸಭಾಹಿತ್, ಸಹ ಕುಲಪತಿಗಳು, ಮಾಹೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ. ಪ್ರೊ. ವನಿತಾಮಯ್ಯ, ಪ್ರಾಂಶುಪಾಲರು-ಎಂ.ಜಿ.ಎಂ ಕಾಲೇಜು ಉಡುಪಿ, ಡಾ. ದೇವಿದಾಸ್ ಎಸ್. ನಾಯ್ಕ್, ಪ್ರಾಂಶುಪಾಲರು ಎಂ.ಜಿ.ಎಂ ಸಂಧ್ಯಾ ಕಾಲೇಜು, ಶ್ರೀಮತಿ ಪೂರ್ಣಿಮಾ, ಸಹಾಯಕ ನಿರ್ದೇಶಕರು-ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಮತ್ತು ಡಾ. ಎಂ. ವಿಶ್ವನಾಥ ಪೈ, ಉಪ ಪ್ರಾಂಶುಪಾಲರು, ಎಂ.ಜಿ.ಎಂ ಕಾಲೇಜು ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಿನಾಂಕ: 07.12.2025ರಂದು ಶ್ರೀಮತಿ ಪ್ರತಿಭಾ ಎಂ.ಎಲ್ ಸಾಮಗ, ಸಂಗೀತ ಹಾಗೂ ಸಾಂಸ್ಕೃತಿಕ ಚಿಂತಕರು, ಉಡುಪಿ ಇವರು ಸಮಾರೋಪದ ನುಡಿಯನ್ನು ಆಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತ ಅಧಿಕಾರಿ ಡಾ. ಜಗದೀಶ್ ಶೆಟ್ಟಿ, ಆರ್ ಆರ್ ಸಿ ಯ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಹಾಗೂ ಭಜನಾ ಸಮಾವೇಶದ ಸಂಯೋಜಕರಾದ ರವಿರಾಜ್ ಎಚ್. ಪಿ. ಉಪಸ್ಥಿತರಿದ್ದರು.















Leave a Reply