Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

21.44 ಲಕ್ಷ ರೂ. ಮೌಲ್ಯದ ಕಾಫಿ ಚೀಲ ಕಳವು : 5 ಜನರ ಬಂಧನ…!!

ಪುತ್ತೂರು : ಕಂಪನಿಯೊಂದಕ್ಕೆ ತಲಾ 60 ಕೆಜಿ ತೂಕದ ಕಾಫಿ ಬೀಜ ತುಂಬಿದ 320 ಗೋಣಿಚೀಲಗಳನ್ನು ಸಾಗಿಸುತ್ತಿದ್ದ ಲಾರಿಯೊಂದರಿಂದ ಸುಮಾರು 21,44,000 ರೂ. ಮೌಲ್ಯದ 80 ಗೋಣಿ ಚೀಲಗಳನ್ನು ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕೃತ್ಯಕ್ಕೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೋಗಳನ್ನು ಹಾಗೂ ಕಳುವಾದ 60 ಕೆಜಿ ತೂಕದ ಕಾಫಿ ತುಂಬಿದ 80 ಚೀಲಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಆರೋಪಿ ಆಶ್ಲೇಷ ಭಟ್ ಹಾಗೂ ಆತನ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ, ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.

ದೂರುದಾರರು ಹಾಗೂ ಲಾರಿಯ ಮಾಲಕ ಮತ್ತು ಚಾಲಕರಾದ ಪುತ್ತೂರು, ಕಬಕ ನಿವಾಸಿ ತೃತೇಶ್ (29) ಎಂಬವರ ದೂರಿನಂತೆ, ಡಿ.3ರಂದು ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯೊಂದರಿಂದ ತಲಾ 60 ಕೆಜಿ ತೂಕದ 320 ಗೋಣಿ ಚೀಲ ಬ್ಯಾಗ್‌ಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳುತ್ತಿದ್ದರು. ಅದೇ ದಿನ ರಾತ್ರಿ ಪುತ್ತೂರಿಗೆ ತಲುಪಿ, ಕಬಕ ನೆಹರೂ ನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಡೋರ್ ಲಾಕ್ ಮಾಡಿ ತನ್ನ ಮನೆಗೆ ತೆರಳಿರುತ್ತಾರೆ.

ಡಿ.4 ರಂದು ಬೆಳಿಗ್ಗೆ ದೂರುದಾರರು ಮರಳಿ ಬಂದು ಲಾರಿಯನ್ನು ಚಲಾಯಿಸುತ್ತಾ ಮಧ್ಯಾಹ್ನ ವೇಳೆ ಮಂಗಳೂರಿನ ಬಂದರಿಗೆ ತಲುಪಿರುತ್ತಾರೆ. ಈ ವೇಳೆ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಲು ಬಂದಾಗ, ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡು ಬಂದಿದೆ. ಲೋಡನ್ನು ಪರಿಶೀಲಿಸಿದಾಗ, ಲಾರಿಯಲ್ಲಿದ್ದ ಕಾಫಿ ಬೀಜ ತುಂಬಿದ ಗೋಣಿಚೀಲಗಳ ಪೈಕಿ ಸುಮಾರು ರೂ 21,44,000 ರೂ. ಮೌಲ್ಯದ 80 ಗೋಣಿ ಚೀಲಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.

ಪಿರ್ಯಾದಿರವರ ದೂರಿನ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 120/2025 ಕಲಂ: 303(2) ಬಿಎನ್‌ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪ್ರಕರಣದ ತನಿಖೆ ನಡೆಸಲಾಗಿ, ಆರೋಪಿ ಆಶ್ಲೇಷ ಭಟ್ ಎಂಬಾತನು, ತನ್ನ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್ ವಿಜಯ ಶೆಟ್ಟಿ, ಮಹಮ್ಮದ್ ಅಶ್ರಫ್ ಎಂಬವರೊಂದಿಗೆ ಸೇರಿ ಕೃತ್ಯ ನಡೆಸಿರುವುದು ವಿಚಾರಣೆಯ ವೇಳೆ ತಿಳಿದುಬಂದಿರುತ್ತದೆ. ಈ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೋವನ್ನು ಹಾಗೂ ಕಳವಾದ 30 ಕೆಜಿ ತೂಕದ ಕಾಫಿ ತುಂಬಿದ 80 ಚೀಲಗಳನ್ನು ಸ್ವಾಧೀನಪಡಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *