• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕವಿ, ಸಂಶೋಧಕ, ಸಂಸ್ಕೃತಿ ಚಿಂತಕ, ಹೋರಾಟಗಾರ ಡಾ.ವಡ್ಡಗೆರೆ ನಾಗರಾಜಯ್ಯ

ByKiran Poojary

Jun 24, 2022

ಡಾ. ವಡ್ಡಗೆರೆ ನಾಗರಾಜಯ್ಯ ಅವರು ನಾಡು ಕಂಡ ಅಪರೂಪದ ವ್ಯಕ್ತಿ. ಕವಿಗಳು, ಲೇಖಕರು ಅಧ್ಯಯನಕಾರರು, ಸಂಶೋಧಕರು, ಸಂಸ್ಕೃತಿ ಚಿಂತಕರು, ಕೃತಿಕಾರರು, ಸಂಘಟಕರು, ಜನಪರ ಹೋರಾಟಗಾರರು, ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿ, ಹೀಗೆ ಎಲ್ಲವೂ ಆಗಿರುವ ವಡ್ಡಗೆರೆಯವರು ಸರಳ ವ್ಯಕ್ತಿತ್ವದ ಸಹೃದಯರು.

ಮೂಲತಹ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದವರಾಗಿರುವ ನಾಗರಾಜಯ್ಯನವರು, ಬೆಂಗಳೂರು ನಿವಾಸಿ, ಸರಕಾರಿ ಕಾಲೇಜೊಂದರಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು. ಕೊರಟಗೆರೆ ತಾಲೂಕಿನಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಲ್ಲಿ ಡಾ. ವಡ್ಡಗೆರೆ ನಾಗರಾಜಯ್ಯ ಸರ್ ಮೊದಲಿಗರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿ ಎಚ್ ಡಿ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ಪಡೆದವರು.

ದಲಿತ ಸಂಘರ್ಷ ಸಮಿತಿಯ ಆರಂಭ ಕಾಲದ ಸಕ್ರಿಯ ಕಾರ್ಯಕರ್ತರಾದ ವಡ್ಡಗೆರೆ ನಾಗರಾಜಯ್ಯನವರು, ಅಲೆಮಾರಿ ಜನ ಸಮುದಾಯಗಳ ಸಬಲೀಕರಣಕ್ಕಾಗಿ ಅಧ್ಯಯನ, ಸಂಶೋಧನ, ರಾಜ್ಯಾದ್ಯಂತ ಸುತ್ತಾಡುತ್ತಾ ಕ್ಷೇತ್ರಕಾರ್ಯದಲ್ಲಿ ನಿರತರಾಗಿರುವ ಮಹಾಮಾನವತಾವಾದಿ. ಈಗಲೂ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನೇರ ನಡೆ ನುಡಿಯ, ದಿಟ್ಟ, ಧೀಮಂತ ಶಕ್ತಿ.

“ಗೋಸಂಗಿ”, ಇವರ ಪ್ರಕಟಿತ ಕವನ ಸಂಕಲನ. ಈ ಸಂಕಲನದಲ್ಲಿರುವ ” ಬಾಲ ಜಂಗಮ ಬಂದವನೆ”, “ಉಸಿರು ದೇವತೆ ಮಾತಂಗಿ” ಮತ್ತು “ತೊಡೆ ತೊಟ್ಟಿಲ ಜೋಗುಳದುಯ್ಯಾಲೆ” ಎಂಬ ಮೂರು ಕವನಗಳು ಮೈಸೂರು ವಿಶ್ವ ವಿದ್ಯಾನಿಲಯದ ದ್ವಿತೀಯ ಎಂಎ (ಕನ್ನಡ) ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. “ಬಾಲ ಜಂಗಮ ಬಂದವನೆ” ಕವನವು ರಾಣಿ ಚೆನ್ನಮ್ಮ ಮಹಿಳಾ ವಿಶ್ವವಿದ್ಯಾನಿಲಯದ ಬಿಕಾಂ ನಾಲ್ಕನೇ ಸೆಮಿಸ್ಟರ್ ತರಗತಿಗೆ ಪಠ್ಯವಾಗಿದೆ.

ಇವರ, “ಸಮಾಜವಾದಿಗಳ ನೆನಪಿನ ಸಂಪುಟ” ಗಳನ್ನು ಹಂಪಿ ಕನ್ನಡ ವಿವಿಯ ಡಾ. ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಯೋಜನೆಯಡಿಯಲ್ಲಿ ‘ಪ್ರಸಾರಂಗ’ವು ವಡ್ಡಗೆರೆಯವರು ಸಿದ್ಧಪಡಿಸಿದ “ಸಮಾಜವಾದಿಗಳ ನೆನಪಿನ ಸಂಪುಟ” ಗಳನ್ನು ಪ್ರಕಟಿಸಿದೆ.

*ಇವರ, “ವಡ್ಡಗೆರೆ ನಾಗಮ್ಮ: ಮಹಾಸತಿ ಕಾವ್ಯ” ಕೃತಿಯು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಪ್ರಥಮ ಎಂಎ (ಐಚ್ಛಿಕ ಕನ್ನಡ) ತರಗತಿಗಳಿಗೆ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ದ್ವಿತೀಯ ಎಂಎ ತರಗತಿಗಳಿಗೆ ಪಠ್ಯ ಪುಸ್ತಕವಾಗಿದೆ.*

*”ಬುದ್ಧನೆಡೆಗೆ”, ನಾಗರಾಜಯ್ಯನವರ ವೈಚಾರಿಕ ಲೇಖನಗಳ ಸಂಕಲನ. ಇದನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿದೆಯಾದರೆ, “ವಿಮೋಚನಾ ಹೋರಾಟದ ಹಣತೆ: ಪ್ರೊ. ಬಿ. ಕೃಷ್ಣಪ್ಪ” ಎಂಬ ಕೃತಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಯು ಪ್ರಕಟಿಸಿದೆ.*

*”ಆಸಾದಿ”, ಇವರು ರಚಿಸಿದ ಖಂಡಖಾವ್ಯ. ಇದು ಇವರ ಚೊಚ್ಚಲ ಕೃತಿಯೂ ಹೌದು. ಈ ಚೊಚ್ಚಲ ಕೃತಿಗೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲೆಮಾರಿ ಜನಸಮುದಾಯ “ಬುಡ್ಗ ಜಂಗಮ ಸಮುದಾಯ” ದ ಕುರಿತು ಇವರು ಅಧ್ಯಯನ – ಸಂಶೋಧನ – ಕ್ಷೇತ್ರಕಾರ್ಯ ನಡೆಸಿ ಬರೆದ ಕೃತಿ. ಇದನ್ನು ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯು ಪ್ರಕಟಿಸಿದೆ. ಬೌದ್ಧ ಧರ್ಮ ಮತ್ತು ಧಮ್ಮಾಂತರ ಕುರಿತ ಇವರು ಸಂಪಾದಿಸಿದ ಕೃತಿ “ಧಮ್ಮಯಾನ”.*

*ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದ ಡಾ. ವಡ್ಡಗೆರೆ ನಾಗರಾಜಯ್ಯ ಅವರು ಅನೇಕ ಅಂತಾರಾಜ್ಯ ಸೆಮಿನಾರ್ ಗಳಲ್ಲೂ ಭಾಗವಹಿಸಿ ಉಪನ್ಯಾಸ ನೀಡಿದವರು. ತಾರೀಕು 26/06/2022 ಆದಿತ್ಯವಾರ ಬೆಳಗ್ಗೆ ಗಂಟೆ ಹತ್ತಕ್ಕೆ ಉಡುಪಿಯ ಆದಿವುಡುಪಿ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ “ಅಂಬೇಡ್ಕರ್ ಯುವಸೇನೆ” ಆಯೋಜಿಸಿರುವ ವಿಚಾರ ಸಂಕಿರಣದಲ್ಲಿ “ಸಾಂಸ್ಕೃತಿಕ ವಸಾಹತುಶಾಹಿ: ದಲಿತ ಚಳುವಳಿಯ ಪ್ರತಿರೋಧ” ಎಂಬ ವಿಷಯದ ಮೇಲೆ ವಡ್ಡಗೆರೆ ಸರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.*

~ ಶ್ರೀರಾಮ ದಿವಾಣ, ಉಡುಪಿ

3 thoughts on “ಕವಿ, ಸಂಶೋಧಕ, ಸಂಸ್ಕೃತಿ ಚಿಂತಕ, ಹೋರಾಟಗಾರ ಡಾ.ವಡ್ಡಗೆರೆ ನಾಗರಾಜಯ್ಯ”
  1. ಖುಷಿ ಕೊಡುವ ಸಂಗತಿ. ನನ್ನ ಪ್ರೀತಿಯ ಹಿರಿಯ ಮಾರ್ಗದರ್ಶಕರಾದ ಡಾ ವಡ್ಡಗೆರೆ ನಾಗರಾಜಯ್ಯ ಸರ್ ಅವರ ಹಿರಿತನದಲ್ಲಿ ಬರುವ ಈ ಪತ್ರಿಕೆ ನಾಡಿನ ಪ್ರಜ್ಞಾವಂತ ಮನಸುಗಳಿಗೆ ಆಶಾಕಿರಣ ಆಗಿದೆ. ಹಾರ್ದಿಕ ಅಭಿನಂದನೆಗಳು ಸರ್.

  2. ಸೂಪರ್ ವಿ.ಹೆಚ್. ಸರ್ . ಅಭಿನಂದನೆಗಳು ನಿಮ್ಮ ಕೃತಿ, ಕಾವ್ಯಗಳು ಕನ್ನಡ ಬಿ.ಎ., ಹಾಗೂ ಎಂ.ಎ.ತರಗತಿಗಳಿಗೆ ಪಠ್ಯವಾಗಿರವುದು ತುಂಬಾ ಸಂತಸದ ವಿಷಯ ಸರ್. ಶುಭವಾಗಲಿ, ಇನ್ನಷ್ಟು ಮಗದಷ್ಟು ನಿಮ್ಮ ಸಂಶೋಧನಾತ್ಮಕ ಹಾಗೂ ಕ್ಷೇತ್ರ ಕಾರ್ಯಗಳ ಕೃತಿಗಳು ಪ್ರಕಟವಾಗಲಿ.
    .

Leave a Reply

Your email address will not be published. Required fields are marked *