ಬೆಂಗಳೂರು: ಪರಿಸರಸ್ನೇಹಿ ಕೈಚೀಲ ತಯಾರಿಸುವ ಯಂತ್ರ ನೀಡುವುದಾಗಿ ಭರವಸೆ ನೀಡಿ, ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಸಂಪಾದನೆ ಮಾಡುವುದಾಗಿ ನಂಬಿಸಿ, ವ್ಯಕ್ತಿಯೋರ್ವ ಮಹಿಳಾ ಉದ್ಯಮಿಗೆ 74 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಅಶೋಕನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್ವಿ ಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಡೆಟ್ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ ಹೆಗ್ಡೆ ವಿರುದ್ಧ ಮಹಿಳಾ ಉದ್ಯಮಿ ನೀಲಿಮಾ ಎಂಬವರು ನೀಡಿದ ದೂರು ಆಧರಿಸಿ ವಂಚನೆಯಡಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಅಶ್ವಥ್, ಕಳೆದ ಐದು ವರ್ಷಗಳ ಹಿಂದೆ ನೀಲಿಮಾ ಎಂಬವರನ್ನು ಪರಿಚಯಿಸಿಕೊಂಡಿದ್ದ. ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಬಹುದು ಎಂದು ಹೇಳಿದ್ದಲ್ಲದೆ, ಪರಿಸರ ಸ್ನೇಹಿಯಾಗಿರುವ ಬಿಸಿ ನೀರಿನಲ್ಲಿ ಕರಗಿ ಹೋಗುವ ಪ್ಲಾಸ್ಟಿಕ್ ಕೈ ಚೀಲ ಯಂತ್ರ ಖರೀದಿಸಬೇಕು. ಇದಕ್ಕೆ ಕಚ್ಚಾ ಸಾಮಗ್ರಿ ಹಾಗೂ ನುರಿತ ಕಾರ್ಮಿಕರು ಕಂಪನಿ ನೀಡಲಿದ್ದು, ಇದಕ್ಕೆ ಹಣ ಹೂಡಿಕೆ ಮಾಡಬೇಕು ಎಂದು ಮಹಿಳೆಗೆ ಆಮಿಷವೊಡ್ಡಿ ಸುಮಾರು 74 ಲಕ್ಷ ರೂ ಹಣ ಪಡೆದುಕೊಂಡಿದ್ದ.
ಕೆಲ ದಿನಗಳ ಬಳಿಕ ಕಡಿಮೆ ಬೆಲೆಯ ಹಾಗೂ ಕಳಪೆ ದರ್ಜೆ ಯಂತ್ರ ನೀಡಿ ಯಂತ್ರಗಳಿಂದ ಕೈಚೀಲ ತಯಾರಿಸಿದ ಕಾರ್ಮಿಕರನ್ನ ನಿಯೋಜಿಸಿದ್ದ. ಗುಣಮಟ್ಟದ ಕಚ್ಚಾ ಸಾಮಗ್ರಿ ಒದಗಿಸದೇ ಯಂತ್ರದ ಬಗ್ಗೆ ಜ್ಞಾನವೇ ಇಲ್ಲದ ಕಾರ್ಮಿಕರನ್ನು ನೇಮಿಸುವುದಲ್ಲದೆ ಯಂತ್ರ ಸಹ ಹಾಳಾಗಿ ನಷ್ಟಕ್ಕೆ ಕಾರಣವಾಗಿದ್ದ. ಈ ಬಗ್ಗೆ ಪ್ರಶ್ನಿಸಿದರೆ ಯಂತ್ರವನ್ನ ಆರೋಪಿ ಸಹಭಾಗಿತ್ವ ಹೊಂದಿದ್ದ ಮತ್ತೊಂದು ಕಂಪನಿಗೆ ಹಳೆಯ ಯಂತ್ರಗಳನ್ನ ಮಾರಿಸಿ ಹೊಸ ಯಂತ್ರ ನೀಡುವುದಾಗಿ ನಂಬಿಸಿ ವಂಚಿಸಿದ್ದ. ಅನುಮಾನಗೊಂಡು ಈತನ ಹಿನ್ನೆಲೆ ಕೆದಕಿದಾಗ ಬೆಂಗಳೂರು ಮಾತ್ರವಲ್ಲದೆ ಛತ್ತೀಸ್‍ಗಡದಲ್ಲಿ ಮೋಸ ಮಾಡಿದ ಆರೋಪದಡಿ ಅಲ್ಲಿ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿರುವುದು ಗೊತ್ತಾಗಿದೆ.
ಹೂಡಿಕೆ ಮಾಡಿದ ಹಣ ನೀಡುವಂತೆ ಕೇಳಿದರೆ ಹಣ ನೀಡುವುದಾಗಿ ಸಬೂಬು ನೀಡಿ ಕಾಲ ಮೂಂದೂಡಿದ್ದ. ಈ ಬಗ್ಗೆ ಅಶೋಕನಗರ ಪೆÇಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆರೋಪಿ ಅಶ್ವಥ್‍ಗೆ ಆಂಗ್ಲ ನಿಯತಕಾಲಿಕೆಯೊಂದು ಉದಯೋನ್ಮುಖ ಪ್ರಶಸ್ತಿ ಸೇರಿ ಹಾಗೂ ಹಲವು ಸಂಘ-ಸಂಸ್ಥೆಗಳಿಗೆ ಈತನ ಪರಿಸರ ಸ್ನೇಹಿ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ನೀಡಿದೆ. ವಂಚನೆಗೆ ಸಂಬಂಧಿಸಿದಂತೆ ದಾಖಲಾತಿ ಸಮೇತ ಅ.25ರಂದು ವಿಚಾರಣೆ ಹಾಜರಾಗುವಂತೆ ದೂರುದಾರರಿಗೆ ಪೊಲೀಸರು ತಿಳಿಸಿದ್ದಾರೆ.