ಕುಂದಾಪುರ ಬಹೂದ್ದೂರ್ ಷಾ ರಸ್ತೆಯ ಸುಡಗಾಡು ತೋಡು ಉಕ್ಕೇರಿ ಸ್ಥಳೀಯರ ಮನೆಗೆ ನೀರು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಇಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ ಕೆ ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸುಡಗಾಡು ತೋಡಿನ ಸಮಸ್ಯೆಯನ್ನು ತಕ್ಷಣದಲ್ಲಿ ಪರಿಹರಿಸುವಂತೆ ಮತ್ತು ಪ್ರತಿನಿತ್ಯ ಇಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಂತೆ ಕುಂದಾಪುರ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಈ ತೋಡಿಗೆ ಹೊಂದಿಕೊಂಡು ಇರುವ ಅಕ್ರಮ ಹಂದಿಸಾಗಣೆ ಶೆಡ್ ನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.ಈ ಹಂದಿಸಾಗಣೆ ಶೆಡ್ ನಿಂದ ನೇರವಾಗಿ ಸುಡಗಾಡು ತೋಡಿಗೆ ಹಂದಿತ್ಯಾಜ್ಯವನ್ನು ಬಿಡುತ್ತಿದ್ದು ಸಾಂಕ್ರಾಮಿಕ ರೋಗರುಜಿನಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆಯೂ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪುರಸಭಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳೊಂದಿಗೆ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಮಿ,ಕುಂದಾಪುರ ಪುರಸಭೆ ಮುಖ್ಯಾಧಿಕಾರಿ,ಆರೋಗ್ಯ ನೀರಿಕ್ಷಕರು,ಪುರಸಭೆ ಸದಸ್ಯ ಚಂದ್ರಶೇಖರ್ ಖಾರ್ವಿ ಮತ್ತು ಸಮಾಜ ಸೇವಕ ಸುನಿಲ್ ಖಾರ್ವಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.
ಕುಂದಾಪುರ : ಸುಡುಗಾಡು ತೋಡು ಅವ್ಯವಸ್ಥೆ, ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
