
ಮೂಲ್ಕಿ: ಕಲ್ಲಿದ್ದಲು ಸಾಗಾಟ ಮಾಡುತ್ತಿದ್ದ ಲಾರಿಗೆ ಅದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದು, ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಕ್ಷೀರಸಾಗರ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಗಾಯಗೊಂಡವರನ್ನು ಚಾಲಕ ಕೊಕ್ಕರಕಲ್ ನಿವಾಸಿ ರೋಹನ್ ಹಾಗೂ ಪ್ರಯಾಣಿಕ ಅಂಗರಗುಡ್ಡೆ ನಿವಾಸಿ ರಮೇಶ್ ದೇವಾಡಿಗ ಎಂದು ಗುರುತಿಸಲಾಗಿದೆ.
ಮಂಗಳೂರು ಕಡೆಯಿಂದ ಹೊಸಪೇಟೆ ಕಡೆಗೆ ಲಾರಿ ಚಲಿಸುತ್ತಿತ್ತು. ಕಾರು ಚಾಲಕನ ನಿರ್ಲಕ್ಷತನದಿಂದ ನಿಯಂತ್ರಣ ತಪ್ಪಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಮೂಲ್ಕಿ ಉದ್ಯಮಿಯೊಬ್ಬರಿಗೆ ಸೇರಿದ ಇನೋವಾ ಕಾರು ಇದಾಗಿದ್ದು ಕಾರಿನಲ್ಲಿದ್ದ ಚಾಲಕ ರೋಹನ್ ಹಾಗೂ ಪ್ರಯಾಣಿಕ ರಮೇಶ್ ದೇವಾಡಿಗ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದ ರಭಸಕ್ಕೆ ಇನ್ನೋವಾ ಕಾರಿನ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಸ್ವಲ್ಪ ಹೊತ್ತಿನಲ್ಲಿ ಕಾರಿನಲ್ಲಿದ್ದ ಪರ್ಸ್ ಹಾಗೂ ಎಟಿಎಂ ಕಾರ್ಡ್ ಅನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಕಾರಿನ ಮಾಲಕ ದೂರಿದ್ದಾರೆ.