Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆತುರದ ಆಕ್ಷೇಪದಾಚೆ : ಅಶ್ವಿನಿ ಅಂಗಡಿ ಬದಾಮಿ….

“ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು , ಅವಸರವೇ ಅಪಾಯಕ್ಕೆ ಹಾದಿ “.ಇಂತಹ ಹತ್ತಾರು ಗಾದೆ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ದಿನಂಪ್ರತಿಯು ಕೇಳೇ ! ಕೇಳಿರುತ್ತೇವೆ ಆದರೆ, ನಾವು ಈ ಗಾದೆಯ ಅನುಪಾಲನೆಯನ್ನು ಮಾಡುವಲ್ಲಿ  ಆಮೆ ಗತಿಯಲ್ಲಿ ಸಾಗುತ್ತೇವೆ . ಜೀವನದಲ್ಲಿ ಕೆಲ ಸನ್ನಿವೇಶ , ಸಂಗತಿಗಳು ನಮ್ಮನ್ನು ಗೊಂದಲಕ್ಕೀಡು ಮಾಡಿ ಆಲೋಚನೆ ಮಾಡುವಲ್ಲಿ ವಿಫಲರಾಗುವಂತೆ ಮಾಡುತ್ತವೆ. ಆಗಲೇ  “ಆತುರ” ಎನ್ನುವ ಅಂಶ ನಮ್ಮನ್ನು ಆವರಿಸಿ ಕಾರ್ಯದಲ್ಲಿ ವಿಘ್ನಗಳನ್ನುಂಟು ಮಾಡುವುದು. ತಿಜೋರಿಯ ಪಕ್ಕದಲ್ಲಿ ಕೆಲಸದ ಆಳು ನಿಂತ ಮಾತ್ರಕ್ಕೆ ಅವನು ಕದಿಯಲು ಹೊಂಚು ಹಾಕುತ್ತಿದ್ದಾನೆ ಎಂಬ ಕಲ್ಪನೆ , ಹಾಗೂ ಒಂದು ಹೆಣ್ಣು ಪರಪುರುಷನೊಂದಿಗೆ ಸಲುಗೆಯಿಂದ ನಡೆದುಕೊಂಡಾಗ ಅನೈತಿಕತೆಯ ಬಣ್ಣ ಬಳಿಯುವ ಸಾಹಸ , ಅಲ್ಲದೇ ರಸ್ತೆಯಲ್ಲಿ ಆತುರವಾಗಿ ಹಾಗೂ ಹುಚ್ಚು ಆತ್ಮಸ್ಥೈರ್ಯದಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೀಡಾದವರು ಇವೆಲ್ಲಾ ಉದಾಹರಣೆಗಳು ನಮ್ಮಲ್ಲಿ ಕಂಡುಬರುವ ನಿತ್ಯದ ದಡ್ಡತನಗಳು ಇಂತಹ ಆಲೋಚನೆಗಳು ಎಷ್ಟೋ ನಿಷ್ಠಾವಂತರ ಬದುಕನ್ನು ಕಸಿದುಕೊಂಡಿವೆ.

ಹೀಗೊಂದು ಕುರುಕ್ಷೇತ್ರದ ಯುದ್ಧದ ಪ್ರಸಂಗ ಭೀಕರ ಯುದ್ಧ ನಡೆಯುತ್ತಿದ್ದಾಗ ದುರ್ಯೋಧನನಿಗೆ ನಾವು (ಕೌರವರು) ಖಂಡಿತವಾಗಿಯೂ ಸೋಲುತ್ತೇವೆ ಎಂಬ ಭಯ ಕಾಡಲಾರಂಭಿಸಿತು ಅಲ್ಲದೆ ಅವನು ದುರಾಲೋಚನೆಯಲ್ಲಿ ಮುಳುಗಿದ್ದು ,  ನಮ್ಮಲ್ಲಿ ಎಂತಹ ಸಾಹಸಿ ರಾಜರು  , ಯುದ್ಧ ಗುರುಗಳು ಹಾಗೂ ಬಲಿಷ್ಠ ಸೈನ್ಯವಿದ್ದರೂ ಪಾಂಡವರ ಮುಂದೆ ಸೋಲುವ ಭಯ ಅವನನ್ನು ಆವರಿಸಿತ್ತು. ಕೂಡಲೇ ಮಹಾಪಿತ ಭೀಷ್ಮನಲ್ಲಿ ಬಂದು ಅಜ್ಜ ನನಗೆ ನಿಮ್ಮ ಮೇಲೆ ಅನುಮಾನ ಮೂಡುತ್ತಿದೆ ಏಕೆಂದರೇ  !  ನೀವು ಪಾಂಡವ ಮೊಮ್ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಿದ್ದಿರಿ ಹಾಗಾಗಿ ಎಲ್ಲಾ ಬಲವಿದ್ದರೂ ನಾವು ಸೋಲುವುದು ಇದಕ್ಕೆ ಕಾರಣ ಇರಬಹುದು ನೀವು ಏನೂ ಕುತಂತ್ರ ಮಾಡಿ ಪಾಂಡವರು ಗೆಲ್ಲುವ ಹಾಗೆ ಮಾಡುತ್ತಿರುವಿರಿ ಎಂದು ನಿರ್ಧಾಕ್ಷಿಣ್ಯವಾಗಿ ಆಕ್ಷೇಪಿಸಿದನು . 

ಆಗ ಕ್ರೋಧೀತರಾದ ಭೀಷ್ಮ ರು  ನಾನು  “ಉಂಡ ಮನೆಗೆ ಎರಡು ಬಗೆಯುವ ಜಾತಿಯವನಲ್ಲ ” ಎಂದು ಹೇಳಿ ತಮ್ಮ ತಪಸ್ಸಿನ ಬಲ ಎಲ್ಲವನ್ನು ಧಾರೆಯೆರೆದು ಐದು ಬಾಣಗಳನ್ನು ನಿರ್ಮಿಸಿದರು . ಆಗ ದುರ್ಯೋಧನರಿಗೆ ಹೀಗೆ ಹೇಳುವರು ನೋಡು ಯುವರಾಜ ಇವು ನನ್ನ ಎಲ್ಲಾ ಯುದ್ಧ ಬಲವನ್ನು ಧಾರೆ ಎರೆದು ಮಾಡಿದ ಶಕ್ತಿಯುತ ಬಾಣಗಳು ಇವುಗಳನ್ನು ಯಾರ ಮೇಲೆ ಪ್ರಯೋಗಿಸುತ್ತೇವೆಯೋ ಅವರ ಸಾವು ಖಂಡಿತ . 

ಈ ಐದು ಬಾಣಗಳನ್ನು ಪಾಂಡವರ ಮೇಲೆ ಹೂಡಿ ನಾಳೆಯೇ ಯುದ್ದಕ್ಕೆ ವಿರಾಮ ನೀಡುವೆ ಎಂದು ಹೇಳಿದರು. ಆಗಲೂ ಸುಮ್ಮನಿರದ ದುರ್ಯೋಧನ ತನ್ನ ಕುಟಿಲ ಬುದ್ಧಿಯಿಂದ ಈ ಬಾಣಗಳನ್ನು ನೀವು ಪಾಂಡವರಿಗೆ ನೀಡಿದರೆ ಏನು  ಮಾಡುವುದು? ಹಾಗಾಗಿ ಇವುಗಳು ನನ್ನ ಬಳಿ ಇರಲಿ ಎಂದು ಕೇಳಿದನು ಆಗ ಭೀಷ್ಮರು ಜೋಪಾನ ಇವು ನನ್ನೆಲ್ಲ ಯುದ್ಧ ಬಲ ತುಂಬಿರುವ ಶಕ್ತಿಯುತ ಬಾಣಗಳು ಇವನ್ನು ಕಳೆದುಕೊಳ್ಳಬೇಡ  ಜೋಪಾನವಾಗಿ ಇಟ್ಟುಕೋ ಎಂದರು. ತುಂಬಾ ಖುಷಿಯಿಂದ ಕೌರವ ರಾಜ ಏನೋ ಶಿಬಿರಕ್ಕೆ ಮರಳಿದ . ಆದರೆ  ! ವಿಧಿ ಲಿಖಿತವೇ ಬೇರೆಯಾಗಿತ್ತು.

ಹಿಂದೊಮ್ಮೆ ಯಾವುದೋ ಸಂಕಷ್ಟದಲ್ಲಿದ್ದ ದುರ್ಯೋಧನನನ್ನು ಅರ್ಜುನನು ಪ್ರಾಣಪಾಯದಿಂದ ಕಾಪಾಡಿದ್ದನು . ಆಗ ಸೊಕ್ಕಿನಿಂದ ದುರ್ಯೋಧನನು ನೀನು ಕೌರವಾಧಿಪತಿಯನ್ನು ಸಂರಕ್ಷಿಸಿದ್ದಿಯಾ ಅದಕ್ಕಾಗಿ ಏನು ಬೇಕು ಕೇಳು ಎಂದಿದ್ದನು  ಆಗ ಅರ್ಜುನ ನನಗೆ ಸಮಯ ಬರಲಿ ಕೇಳುವೆ ಎಂದು ಹೇಳಿ ಸುಮ್ಮನಾಗಿದ್ದನು .

ಈಗ ಆ ಸಂದರ್ಭವನ್ನು ಹೊತ್ತು ಅರ್ಜುನನು ಕೌರವ ಅಧಿಪತಿಯ ಮುಂದೆ ಬಂದನು.ಮತ್ತೆ ಕೇಳಿದನು ಧುರ್ಯೋಧನ ನನಗೆ ಆ ಐದು ಭೀಷ್ಮರ ಬಾಣಗಳು ಬೇಕು ಎಂದು.  ಆಗ ದುರ್ಯೋಧನನ ಜಂಘಾಬಲವೇ ಉಡುಗಿ ಹೋಯಿತು ಕೊಟ್ಟ ಮಾತನ್ನು ನಡೆಸಿ ಕೊಡುವುದು ಕ್ಷತ್ರಿಯನಾದವನ ಧರ್ಮವಾದ್ದರಿಂದ ವಿಧಿ ಇಲ್ಲದೆ ಆ ಐದು ಬಾಣಗಳನ್ನು ಅರ್ಜುನನಿಗೆ ಕೊಟ್ಟುಬಿಟ್ಟನು ದುರ್ಯೋಧನ . ದುರ್ಯೋಧನನು ಆತುರದಲ್ಲಿ ತೆಗೆದುಕೊಂಡ ಆ ಎರಡು ನಿರ್ಧಾರಗಳಾದ ಭೀಷ್ಮರನ್ನು ಕೆರಳಿಸಿದ್ದು  ಹಾಗೂ ಅನುಮಾನ ಪಟ್ಟು ಆ ಬಾಣಗಳನ್ನು ತನ್ನ ಬಳಿ ತಂದಿದ್ದು ಅವನ ಅವನತಿಗೆ ದಾರಿಯಾಯಿತು ಆದ್ದರಿಂದ ನಾವು ತೆಗೆದುಕೊಳ್ಳುವ ನಿರ್ಧಾರಗಳು ಆಲೋಚನೆಯುಕ್ತವಾಗಿರಬೇಕು ಹಾಗೆಯೇ ಕಣ್ಣು ಕಂಡದ್ದನ್ನು ನಂಬಿ ದುರ್ಗತಿಯನ್ನು ತಂದುಕೊಳ್ಳಬಾರದು ಸಮಯ ತೆಗೆದುಕೊಂಡು ನಿಧಾನವಾಗಿ ಯೋಚಿಸಿ ವಿಚಾರಗಳನ್ನು ಹೊಂದಿ ಪ್ರತಿ ಕಾರ್ಯಗಳನ್ನು ಕೈಗೊಂಡಿದ್ದಲ್ಲಿ ಯಶಸ್ಸು ಸಿದ್ಧವಾಗುವುದು……

ಅಶ್ವಿನಿ ಅಂಗಡಿ, ಬದಾಮಿ

Leave a Reply

Your email address will not be published. Required fields are marked *