Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಾಡಿನ ಕಲಾವಿದರೆಲ್ಲ ಸಮಾಜದ ಋಣ ತೀರಿಸಲಿ… : ಸಚ್ಚಿದಾನಂದ ಭಾರತೀ ಶ್ರೀ ಆಶೀರ್ವಚನ

ಬದುಕಿನ ಸತ್ಯ, ಮಾಯೆಯ ನೆಲೆಯ ಜೀವನದಲ್ಲಿ ಪ್ರೊ.ಶಂಕರ್ ಅವರು ಕಲೆಗಾಗಿ ಬದುಕಿದ ವ್ಯಕ್ತಿ. ಮ್ಯಾಜಿಕ್ ಮೂಲಕವೂ ಜನರ ಮದ್ಯವ್ಯಸನ ಮುಕ್ತ ಬದುಕಿಗೆ ಕೊಡುಗೆ ನೀಡಿದ್ದಾರೆ. ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು ಎಂದು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗಿಲಿಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಅದ್ಭುತ ಜಾದೂಗಾರ ಪ್ರೊ.ಶಂಕರ್:
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಕರ್ನಾಟಕ ಕರಾವಳಿಯ ಮೊಟ್ಟ ಮೊದಲ ಜಾದೂಗಾರ ಪ್ರೊ.ಶಂಕರ್ ಅವರಿಗೆ ಎಂದೋ ಅಭಿನಂದನೆ, ಸನ್ಮಾನ ಆಗಬೇಕಿತ್ತು. ಪ್ರಶಸ್ತಿ ಸನ್ಮಾನಗಳಿಂದ ದೂರವಿರುವ ಅವರು, ನಾಡಿನ ಅದ್ಭುತ ಜಾದೂಗಾರ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಶಸ್ತಿಗೆ ಪರಿಗಣಿಸಲಿ ಸರ್ಕಾರ:
ಇಂದ್ರಜಾಲ ಪ್ರವೀಣ ಓಂ ಗಣೇಶ್ ಉಪ್ಪುಂದ ಅಭಿನಂದನಾ ಮಾತುಗಳನ್ನಾಡಿ, ಒಂದು ಕಾಲದಲ್ಲಿ ರಾಜಾಶ್ರಯವಿದ್ದ ಜಾದೂ ಕಲೆಯೀಗ ಸಂವಹನ, ಸಂವೇದನೆ ಇಲ್ಲದ ಕಲೆಯಾಗಿದೆ. ಸರ್ಕಾರವೂ ಸಹ ಜಾದೂಗಾರರನ್ನು ಪ್ರಶಸ್ತಿಗೆ ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿ, ಪ್ರೊ.ಶಂಕರ್ ಅಂತ:ಕರಣಕ್ಕೆ ಸನ್ಮಾನ ಸಂದಿದೆ. ಸರಳ ಹಾಗೂ ಸಜ್ಜನಿಕೆಯ ವಿಚಾರದಲ್ಲಿ ಎಲ್ಲ ಕಲಾವಿದರಿಗೂ ಅವರು ಮಾದರಿ ಎಂದರು.

ಜನರಿಗೆ ಬ್ಯಾಂಕಿಂಗ್ ಮಾಹಿತಿ:
ಅಧ್ಯಕ್ಷತೆ ವಹಿಸಿದ್ದ ಪ್ರೊ.ಶಂಕರ್ ಅಭಿನಂದನಾ ಸಮಿತಿ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಮಾತನಾಡಿ, ಶಂಕರ್ ಅವರ ಜಾದೂ ಪ್ರದರ್ಶನ ನೋಡಿ ಕೋಟ ಡಾ. ಶಿವರಾಮ ಕಾರಂತ ಅವರು ಸಹ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಜಾದೂ ಪ್ರದರ್ಶನದ ಮೂಲಕವೇ ಗ್ರಾಮೀಣ ಭಾಗದ ಬ್ಯಾಂಕಿಂಗ್ ವ್ಯವಸ್ಥೆ, ಯೋಜನೆ ತಲುಪಿಸಿದ ಏಕೈಕ ಜಾದೂಗಾರ ಅವರು ಎಂದು ಬಣ್ಣಿಸಿದರು.

‘ಜಾದೂ ಜರ್ನಿ’ ಪುಸ್ತಕ ಬಿಡುಗಡೆ

ಪ.ರಾಮಕೃಷ್ಣ ಶಾಸ್ತ್ರಿ ರಚಿತ ‘ಪ್ರೊ.ಶಂಕರ್ ಜಾದೂ ಜರ್ನಿ’ ಪುಸ್ತಕವನ್ನು ನಾಡೋಜ ಪ್ರೊ.ಕೆ.ಪಿ. ರಾವ್ ಬಿಡುಗಡೆ ಮಾಡಿ ಮಾತನಾಡಿ, ಆಂತರಿಕ ಶಿಸ್ತು ಎನ್ನುವುದು ವ್ಯಕ್ತಿ, ಸಂಸ್ಥೆಗಳಲ್ಲಿರಬೇಕು. ಕಂಪ್ಯೂಟರ್ಗಳ ಸಹಿತ ಮ್ಯಾಜಿಕ್ ಕಲೆಯೂ ಸಾಮಾಜಿಕ ಉದ್ಧಾರಕ್ಕೆ ಬಳಕೆಯಾಗಬೇಕು ಎಂದರು. ಭುವನ ಪ್ರಸಾದ್ ಹೆಗ್ಡೆ, ಪ್ರೊ.ಶಂಕರ್, ವಿ.ಜಿ.ಶೆಟ್ಟಿ, ಪ್ರಕಾಶ್ ಕೊಡೆಂಕಿರಿ, ಮುರಲಿ ಕಡೆಕಾರ್ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮನೋವೈದ್ಯ ಡಾಕ್ಟರ್ ಪಿ.ವಿ. ಭಂಡಾರಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್, ಪ.ರಾಮಕೃಷ್ಣ ಶಾಸ್ತ್ರಿ, ಲಕ್ಷ್ಮೀಶಂಕರ್ ಉಪಸ್ಥಿತರಿದ್ದರು.

ಪ್ರೊ.ಕೆ.ಸದಾಶಿವ ರಾವ್ ಸ್ವಾಗತಿಸಿದರು. ಸಮಿತಿಯ ಸಂಚಾಲಕ ರವಿರಾಜ್ ಎಚ್. ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

ಭರಪೂರ ಮನರಂಜನೆ ಕಾರ್ಯಕ್ರಮ
ಅಭಿನಂದನೆ ನಿಮಿತ್ತ ವಿದುಷಿ ಮಂಜರಿಚಂದ್ರ ಶಿಷ್ಯರಿಂದ ನೃತ್ಯ ಸಿಂಚನ, ಪ್ರೊ.ಶಂಕರ್ ಜಾದೂ ಜಗತ್ತು ವೀಡಿಯೋ ಪ್ರದರ್ಶನ, ‘ನನ್ನಪ್ಪ…’ ಪುತ್ರ ತೇಜಸ್ಚಿ ಶಂಕರ್ನಿಂದ ಮಾತು. ಪ್ರೊ.ಶಂಕರ್ ಒಡನಾಟ-ಸಂವಾದ, ಕಲಾವಿದ ವಿನಯ್ ಹೆಗಡೆ ಅವರಿಂದ ಕಾಸ್ಮಿಕ್ ಸ್ಪ್ಲಾಷ್ ‘ಗಾಳಿಯಲ್ಲಿ ಚಿತ್ತಾರ’ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು. ಪ್ರೊ.ಶಂಕರ್ ಒಡನಾಟದಲ್ಲಿ ಮಣಿಪಾಲದ ಮೂಳೆ ತಜ್ಞ ಡಾ. ಕಿರಣ್ ಆಚಾರ್ಯ, ರಂಗಕರ್ಮಿ ಮೂರ್ತಿ ದೇರಾಜೆ, ರಾಜಯೋಗಿನಿ ಬಿ.ಕೆ. ಸೌರಭ ಮಾತನಾಡಿದರು. ಆಸ್ಟ್ರೊ ಮೋಹನ್ ಸಮನ್ವಯ ನಡೆಸಿದರು. ನಾರಾಯಣ ಹೆಗಡೆ ಹಾಗೂ ಡಾ.ಎಚ್.ಎನ್. ಉದಯ ಶಂಕರ್ ನಿರೂಪಿಸಿದರು.

ಜನಸಾಮಾನ್ಯರಿಗೆ ಜಾದೂ ಮೂಲಕ ಆರ್ಥಿಕ ಸಾಕ್ಷರತೆ ಮೂಡಿಸಿದ ವಿಶಿಷ್ಟ, ಅಪರೂಪದ ವ್ಯಕ್ತಿ ಪ್ರೊ.ಶಂಕರ್. ಮರಣಾನಂತರ ಮಣಿಪಾಲ ಆಸ್ಪತ್ರೆಗೆ ದೇಹದಾನದ ವಾಗ್ದಾನ ಪತ್ರ ನೀಡಿದ್ದು, ಅವರಲ್ಲಿರುವ ಪರೋಪಕಾರ ಮನಸ್ಸಿನ ಗುಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ತೋನ್ಸೆ ಜಯಕೃಷ್ಣ ಶೆಟ್ಟಿ. ಸ್ಥಾಪಕಾಧ್ಯಕ್ಷ, ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ, ಮುಂಬಯಿ

Leave a Reply

Your email address will not be published. Required fields are marked *