• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮಹರ್ಷಿ ವಾಲ್ಮೀಕಿ

ByKiran Poojary

Oct 28, 2023

ಅಷ್ವಿಜ ಮಾಸದ ಶರತ್ ಪೌರ್ಣಿಮೆ ಯಂದು ತ್ರಿಮೂರ್ತಿಗಳಲ್ಲಿ ಒಬ್ಬರಾದ ಹಾಗೂ ಸೃಷ್ಟಿಕರ್ತರಾದ ಬ್ರಹ್ಮನ ಅಂಶದಿಂದ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಒಬ್ಬ ಮಹಾನ್ ಹಾಗೂ ಆದಿ ಕವಿಯ ಜನನವು ಧರೆಗೆ ಮಾಣಿಕ್ಯವನ್ನು ವರದಾನಿಸಿತ್ತು. ಈಗ ನಾನು ಹೇಳುತ್ತಿರುವುದು ಸಂಸ್ಕೃತ ಭಾಷೆಯ ಆದಿಕವಿ, ಶ್ಲೋಕಗಳ ಸೃಷ್ಟಿಕರ್ತ, ಮಹಾ ಕಾವ್ಯದ ನಿರ್ಮಾತೃ ಎನಿಸಿಕೊಂಡಿರುವ ಪೂಜ್ಯ “ಮಹರ್ಷಿ ವಾಲ್ಮೀಕಿ ಅವರನ್ನು ಕುರಿತು.
ಒಂದು ಕಡೆ ಬುಧ ಕೌಶಿಕ ಮುನಿಗಳು ಶ್ರೀ ರಾಮಸ್ತೋತ್ರಂ ದಲ್ಲಿ ಹೀಗೆ ಹೇಳಿದ್ದಾರೆ

ಕುಜಂತಂ ರಾಮ ರಾಮೇತಿ ಮಧುರಂ//ಮಧುರಾಕ್ಷರಂ!! ಆರುಹ್ಯ ಕವಿತಾಂ ಒಂದೇ ವಾಲ್ಮೀಕಿ,ಕೋಕಿಲಂ …
ಇದರರ್ಥ ಕಾವ್ಯವೆಂಬ ಮರದ ಕೊಂಬೆಯ ಮೇಲೆ ಕುಳಿತು ರಾಮ,ರಾಮ ಎಂದು ಸುಮಧುರವಾಗಿ ಹಾಡುತ್ತಿರುವ ವಾಲ್ಮೀಕಿ ಎಂಬ ಕವಿಕೋಗಿಲೆಗೆ ವಂದಿಸುವೆ ಎಂಬುದಾಗಿದೆ.

ಸತ್ಯ ಯುಗದಲ್ಲಿ ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬರಾದ “ಪ್ರಚೇಸತನರು”ಇಂದ್ರನ ಆಹ್ವಾನದ ಮೇರೆಗೆ ಅವನ ಆಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಇಂದ್ರನು ಈ ಪ್ರಚೇಸತ ನರಿಗೆ ಅತ್ಯಂತ ವೈಭವದಿಂದ ಬರಮಾಡಿಕೊಂಡು ಸಕಲ ಸತ್ಕಾರ ಕಾರ್ಯವನ್ನು ಮಾಡಿದನು, ಜೊತೆಗೆ ರಂಭಾದಿ ಊರ್ವಶಿಯರ ನೃತ್ಯವೂ ಪ್ರಚೇಸತನರನ್ನುಮನಮೋಹಕಗೊಳಿಸಿತ್ತು. ರಂಭೆಯ ರೂಪ ಲಾವಣ್ಯಕ್ಕೆ ಈ ಮಾನಸ ಪುತ್ರರು ಅನುರಾಗ ಹೊಂದಿ ಸ್ವಯಂ ಸ್ಖಲನ ಮಾಡಿಕೊಂಡರು ಆ ಸ್ವಯಂ ಸ್ಖಲನದಿಂದ ಒಂದು “ಪುರುಷಾಕೃತಿ” ನಿರ್ಮಾಣವಾಯಿತು ಅದುವೇ “ಪ್ರಚೇತಸ”ಈ ಪುರುಷ ಆಕೃತಿಯನ್ನು ಕಂಡ ಸಭಿಕರು ಮಾನಸ ಪುತ್ರರಿಗೆ ಅಪಹಾಸ್ಯ ಮಾಡ ಹತ್ತಿದರು.ಇದರಿಂದ ಕುಪಿತರಾದ ಪ್ರಚೇತಸನರು ಆ ಪುರುಷ ಆಕೃತಿಗೆ ಶಾಪವನ್ನು ಕೊಟ್ಟು, ಹೀಗೆ ಹೇಳಿದರು.

ನೀನು ಭೂಲೋಕದಲ್ಲಿ ಕಿರಾತಕನಾಗಿ(ಮೋಡಿಗಾರ, ಕುತಂತ್ರಿ) ಜನಿಸು ಎಂದರು. ಇಂತಹ ಘೋರ ಶಾಪವನ್ನು ಕಂಡ ದೇವತೆಗಳು ಮಾನಸ ಪುತ್ರರಲ್ಲಿ ಶಾಪ ವಿಮುಕ್ತಿಗೆ ಮನವಿ ಇಟ್ಟರು, ಶಾಂತರಾದ ಮಾನಸ ಪುತ್ರರು ನಿನ್ನ ಶಾಪವು “ಸಪ್ತ ಋಷಿಗಳ”ಸಾಂಗತ್ಯದಿಂದ ವಿಮುಕ್ತಿ ಪಡೆಯುವುದು, ಅಲ್ಲದೇ ನೀನು ಲೋಕಕಲ್ಯಾಣಕ್ಕಾಗಿ ಧರ್ಮದ ಉದ್ಧಾರ,ಹಾಗೂ ಸಂಸ್ಕೃತಿಯ ಉನ್ನತಿಗಾಗಿ ಹಲವಾರು ಕೃತಿ, ಕಾವ್ಯಗಳ ರಚನೆ ಮಾಡಿ ಲೋಕ ಪ್ರಸಿದ್ಧಿ ಹೊಂದು ಎಂದು ಹರಸಿದರು. ಅದರಂತೆಯೇ! ಸುಮಾರು ಕ್ರಿಸ್ತಪೂರ್ವ 500 ರ ಕಾಲಘಟ್ಟದಲ್ಲಿ ಬಾಲನಾಮವಾದ “ರತ್ನಾಕರ” ಎಂಬ ನಾಮದಿಂದ ಮಹರ್ಷಿ ವಾಲ್ಮೀಕಿಯವರ ಜನನವಾಯಿತು.

ಇವರು ಬೇಡ ಕುಲದ ಸಂಪರ್ಕದಿಂದ ಅರಣ್ಯದಲ್ಲಿ ಢಕಾಯಿತಿ ಹಾಗೂ ಬೇಟೆಯಾಡುವ ಕಾಯಕದಲ್ಲಿ ತೊಡಗಿ, ತಮ್ಮ ಸಂಸಾರವನ್ನು ಸಾಗಿಸುತ್ತಿದ್ದರು.ಒಮ್ಮೆ ಅರಣ್ಯ ಮಾರ್ಗವಾಗಿ “ಸಪ್ತ ಋಷಿಗಳು” ಹೋಗುತ್ತಿದ್ದಾಗ ಈ ಕಿರಾತಕ ರತ್ನಾಕರನ ಕೈಯಲ್ಲಿ ಸಿಗುತ್ತಾರೆ.ನಿಮ್ಮ ಒಡವೆ, ವಸ್ತ್ರಗಳನ್ನು ಕೊಡಿ ಇಲ್ಲವೆಂದಾದರೆ ನಿಮ್ಮ ಪ್ರಾಣ ಹರಣ ಮಾಡುವೆ ಎಂದು ರತ್ನಾಕರ ಕೊಡಲಿಯನ್ನು ಬೀಸುವನು, ಆಗ ಋಷಿಗಳು ಇಂತಹ ಪಾಪ ಕೃತ್ಯಗಳನ್ನು ವಿವೇಕಿಯಾದ ನೀನು ಮಾಡುವುದು ಸರಿಯಲ್ಲ ಮನುಷ್ಯನಾದವನು ಮಾನವೀಯ ಗುಣ,ಮೌಲ್ಯ ಹೊಂದಬೇಕು.

ನೀನು ಯಾರಿಗಾಗಿ ? ಈ ಪಾಪ ಕೃತ್ಯಗಳನ್ನು ಮಾಡುತ್ತಿರುವೆ ಎಂದು ಋಷಿಮುನಿಗಳು ಕೇಳಿದಾಗ, ರತ್ನಾಕರನು ನನ್ನ ಸಂಸಾರವನ್ನು ಹೊರೆಯಲು ಇಂತಹ ಕಾಯಕಗಳನ್ನು ಮಾಡುತ್ತಿರುವೆ ಎಂದನು. ಋಷಿಗಳು ಹಾಗಾದರೆ ಈ ಎಲ್ಲಾ ಪಾಪ ಕೃತ್ಯಗಳಲ್ಲಿ ನಿನ್ನ ಕುಟುಂಬದವರು ಪಾಲುದಾರರೇ ! ಎಂದು ಕೇಳಿ ಬಾ ಎಂದು ರತ್ನಾಕರನಿಗೆ ಹೇಳಿ ಮನೆಗೆ ಕಳುಹಿಸಿದರು. ಆಗ ರತ್ನಾಕರ ಮನೆಗೆ ಬಂದು ತನ್ನ ಹೆಂಡತಿ ಮಕ್ಕಳನ್ನು ಕರೆದು ಹೀಗೆಂದನು, ನಾನು ನಿಮ್ಮನ್ನು ಸಲುಹಲು ಮಾಡುವ ಎಲ್ಲಾ ಪಾಪ ಕಾರ್ಯದಲ್ಲಿ ನೀವು ಪಾಲುದಾರರಾಗುವೀರಾ ? ಎಂದು ಕೇಳಿದ ಆಗ ಅವರೆಲ್ಲರೂ ನೀನು ನಮ್ಮನ್ನೆಲ್ಲ ಸಾಕಿ ಸಲಹುವುದು ನಿನ್ನ ಕರ್ತವ್ಯವಾಗಿದೆ “ನಮಗೆ ಉದರ ಹೊರೆಯುವುದು ಮಾತ್ರ ಗೊತ್ತು!!ಆದರೆ ಅದಕ್ಕಾಗಿ ನೀನು ಮಾಡುವ ಕಾಯಕದ ಪಾಪ ಪುಣ್ಯಗಳು ನಿನ್ನ ಸ್ವತ್ತು! !ಎಂದರು.

ಇದರಿಂದ ಜ್ಞಾನದ ಅರಿವಾಗಿ ರತ್ನಾಕರನು ಮರಳಿ ಓಡಿ ಬಂದು ಋಷಿಮುನಿಗಳ ಪಾದಗಳಿಗೆ ವಂದಿಸಿದನು. ಭವಿತದಲ್ಲಿ ನಾನು ಇಂತಹ ಪಾಪ ಕರ್ಮಗಳನ್ನು ತ್ಯೆಜಿಸುವೆ ಎಂದು ಪ್ರಮಾಣ ಮಾಡಿದ.ಆಗ ಆ ಋಷಿವರ್ಯರು ಅವನಿಗೆ ರಾಮ ನಾಮವ ಬೋಧಿಸಿ ದೇವನೊಲಿಸಿಕೊಳ್ಳುವ ಪರಿಯನ್ನು ಹೇಳಿ ಹೊರಟು ಹೋದರು. ಅದೇ ಮರದ ಕೆಳಗೆ ರತ್ನಾಕರ ಸರ್ವತ್ಯಾಗಿಯಾಗಿ ಮಹಾ ತಪಸ್ಸು (ಸುಮಾರು 13 ವರ್ಷಗಳ ಕಾಲ ಶರೀರಸ್ಮೃತವಿಲ್ಲದೆ) ಧ್ಯಾನ ಮಾಡಿದ ಇದರಿಂದ ಅವರ ದೇಹದ ಸುತ್ತೆಲ್ಲಾ ಹುತ್ತ ಬೆಳೆಯಿತು ಪುನಃ ಅದೇ ಮಾರ್ಗವಾಗಿ ಆ ಸಪ್ತ ಋಷಿಗಳು ಮರಳಿದರು ತಪಸ್ಸಿನಲ್ಲಿ ಧ್ಯಾನವಾಗಿದ್ದ ಆ ಧ್ವನಿಯನ್ನು ಹುಡುಕುತ್ತಾ ಹುತ್ತದ ಬಳಿ ಬಂದರು ಹುತ್ತವನ್ನು ಒಡೆದು ನೋಡಿದರೆ ರತ್ನಾಕರನು ಪ್ರಖಂಡ ತಪಸ್ಸಿನಲ್ಲಿ ಕುಳಿತಿದ್ದನು.

ಆಗ ಅವನನ್ನು ಎಚ್ಚರಿಸಿ ಋಷಿಗಳು ಅವನಿಗೆ “ವಾಲ್ಮೀಕಿ!!ವಾಲ್ಮೀಕಿ!!” ಎಂದು ಸಂಭೋಧಿಸಿದರು( ಹುತ್ತದಿಂದ ಒಡೆದು ಬಂದವ ಸಂಸ್ಕೃತದ ಪದ ) ಜೊತೆಗೆ ವಾಲ್ಮೀಕಿಗೆ ಇನ್ನು ಮುಂದೆ ನೀನು ಲೋಕಕಲ್ಯಾಣದ ಕಾಯಕದಲ್ಲಿ ತೊಡಗು ಎಂದು ಹರಸಿ ಮುನ್ನಡೆದರು. ಮುಂದೆ ಮಹರ್ಷಿಯು ತಮಸಾ ನದಿಯ ದಂಡೆಯ ಮೇಲೆ ಆಶ್ರಮ ಕಟ್ಟಿಕೊಂಡು ಯಾಗ ಯಜ್ಞಾಧಿಗಳನ್ನು ಮಾಡುತ್ತಿದ್ದರು ಒಂದು ದಿನ ಸ್ನಾನಕ್ಕೆಂದು ತಮಸಾ ನದಿಯ ದಂಡೆಯ ಮೇಲೆ ಕುಳಿತಿದ್ದಾಗ ಅಲ್ಲಿ ಎರಡು ಕಾಮ ಧ್ಯಾನದಲ್ಲಿದ್ದ ಕ್ರೌoಚ ಪಕ್ಷಿಗಳನ್ನು ನೋಡಿದರು, ತಕ್ಷಣವೇ ಬೇಡ ನಿಂದ ಬಂದಂತಹ ಒಂದು ಬಾಣವು ಗಂಡು ಕ್ರೌoಚ ಪಕ್ಷಿಯನ್ನು ಕೊಂದು ಹಾಕಿತು. ಇದನ್ನು ಕಂಡು ಕ್ರೋಧಗೊಂಡ ಮಹರ್ಷಿಗಳು ಬೇಟೆಗಾರನಿಗೆ ಕಾವ್ಯದ ರೂಪದಲ್ಲಿ ಬೈದರು ನಂತರ ಶಾಂತವಾಗಿ ಕುಟೀರಕ್ಕೆ ಮರಳಿದರು ಆಗ ಅಲ್ಲಿ “ಬ್ರಹ್ಮನು” ಪ್ರತ್ಯಕ್ಷವಾಗಿ ಬೇಡನಿಗೆ ಬೈದೆನೆಂದು ಮರುಗಬೇಡ ಮಹರ್ಷಿಯೇ!ನೀನು ಕೋಪಿಸಿ ಬೈದದ್ದು ಬೈಗುಳವಲ್ಲ ಅದು ಒಂದು ಮಹಾಕಾವ್ಯದ ರಚನೆಯ ಮುನ್ನುಡಿಯಾಗಿದೆ ಎಂದರು.

ಆ ಶ್ಲೋಕ ಹೀಗಿದೆ
“ಮಾ ನಿಷಾದತ್ವಂ ಆಗಮಹ ಶಾಶ್ವತಿ, ಯತ್ ಕ್ರೌ0ಚ
ಮಧುನಾದಿ ಕಮ್ ಅವಧಿ ಕಾಮ ಮೋಹಿತಂ” ಇದರ ಅರ್ಥ “ಎಲೈ ನಿಷಾದನೆ ಕಾಮ ಮೋಹಿತ ಕ್ರೌoಚ ದಂಪತಿಗಳಲ್ಲಿ ಒಂದು ಗಂಡು ಪಕ್ಷಿಯನ್ನು ಕೊಂದ ನೀನು ಬಹುಕಾಲ ಬಾಳು ಎಂಬುದಾಗಿ” .ಇದರ ಅರ್ಥವನ್ನು ಬ್ರಹ್ಮನು ಸಕಾರಾತ್ಮಕವಾಗಿ ಈ ರೀತಿ ಹೇಳುತ್ತಾರೆ ಆ ಪಕ್ಷಿಗಳನ್ನು “ರಾವಣ-ಮಂಡೋದರಿಗೆ” ಹೋಲಿಸಿ, ಬೇಡನನ್ನು “ರಾಮನಿಗೆ”ಹೋಲಿಸಿ ಕಾಮರೂಪಿಯಾದ ರಾವಣನನ್ನು ಕೊಂದ ನೀನು ಶಾಶ್ವತವಾಗಿ ಬಾಳು ಎಂದು ಸರ್ವ ಮಂಗಳ ಸೂಚಿಸಿರುವ ವಾಕ್ಯವಾಗಿದೆ ,ಎಂದು ಮಹರ್ಷಿಗೆ ವಿವರಣೆ ನೀಡಿದರು.

ಜೊತೆಗೆ ಬ್ರಹ್ಮದೇವನು ಮಹರ್ಷಿಯವರಿಗೆ ವರವನ್ನಿಟ್ಟು, ಅದೃಶ್ಯವಾದರು. ಮುಂದೆ ದೇವರ್ಷಿ ನಾರದರ ಸಹಾಯದಿಂದ ಮಹರ್ಷಿ ವಾಲ್ಮೀಕಿಯವರು “ಶ್ರೀಮದ್ ರಾಮಾಯಣವನ್ನು” ಸಂಸ್ಕೃತ ಭಾಷೆಯಲ್ಲಿ ರಚಿಸಿದರು ಇದು 8 ಕಾಂಡಗಳನ್ನು ಹಾಗೂ 24,000 ಶ್ಲೋಕಗಳನ್ನು ಮತ್ತೆ 18 ಅಧ್ಯಾಯಗಳನ್ನು ಹೊಂದಿರುವುದಾಗಿದೆ ಈ ಒಂದು ಮಹಾಕಾವ್ಯವನ್ನು ಶ್ರೀ ರಾಮನ ಮಕ್ಕಳು ಹಾಗೂ ವಾಲ್ಮೀಕಿ ಮಹರ್ಷಿಯ ಶಿಷ್ಯರಾದ ಲವ-ಕುಶರು ಗಾನದ ರೂಪದಲ್ಲಿ ಶ್ರೀ ರಾಮನ ಅವತಾರಗಳನ್ನು ಹೇಳುತ್ತಾ ಪ್ರಚಾರ ಗೈದರು.ಜೊತೆಗೆ ಭರತ ಮುನಿಯ ಶಿಷ್ಯಂದಿರು ಈ ಮಹಾಕಾವ್ಯವನ್ನು ನಾಟಕ ರೂಪದಲ್ಲಿ ಪ್ರದರ್ಶಿಸುತ್ತಾ ಪ್ರಸಿದ್ಧಿಗೊಳಿಸಿದರು ಹೀಗೆ ಮಹಾಕವಿಯಾದ ಶ್ರೀ ಮಹರ್ಷಿ ವಾಲ್ಮೀಕಿ ಅವರು ಹಿಂದೂ ಧರ್ಮದ ಪವಿತ್ರ ಮಹಾಕಾವ್ಯವಾದ “ಶ್ರೀ ಮದ್ ರಾಮಾಯಣದ” ರಚನೆಯನ್ನು ಮಾಡಿ ನಮ್ಮ ಸಂಸ್ಕೃತಿಯ, ಶ್ರೇಷ್ಠತೆಯ, ಸೀಮೋಲ್ಲಂಘನೆ ಮಾಡಿದ್ದಾರೆ.

ಅಶ್ವಿನಿ ಅಂಗಡಿ
ಶಿಕ್ಷಕಿ ಹಾಗೂ ಲೇಖಕಿ
ಬದಾಮಿ

Leave a Reply

Your email address will not be published. Required fields are marked *