✒️ ಓಂಕಾರ ಎಸ್. ವಿ. ತಾಳಗುಪ್ಪ
ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಒಂದು ಕೋಟಿ ಸಾರ್ವಜನಿಕ ತೆರಿಗೆ ಹಣದ ವೆಚ್ಚದಲ್ಲಿ ನಿರ್ಮಿಸಿದ ” ಯಾತ್ರಿ ನಿವಾಸ ” – ಕಾಮಗಾರಿ ಮುಗಿದು ಹಲವು ವಸಂತಗಳು ಕಳೆದರೂ ಭಕ್ತರ ಸೇವೆಗೆ ನಿಲುಕದ ಸುಸಜ್ಜಿತ ಯಾತ್ರಿ ನಿವಾಸ – ಶೀಘ್ರದಲ್ಲಿಯೇ ಯಾತ್ರಿ ನಿವಾಸ್ ಭಕ್ತರ ಸೇವೆಗೆ ಕ್ರಮ ಶಿಕ್ಷಣ ಸಚಿವ & ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾಧ್ಯಮಕ್ಕೆ ಸ್ಪಷ್ಟನೆ
ಸಾಗರ :- ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಶಕ್ತಿ ದೇವತೆಯೆಂದು ಆರಾಧಿಸಲ್ಪಡುವ ಶರಾವತಿ ಎಡದಂಡೆಯ ಸಿಗಂದೂರು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಆಥಿತ್ಯ ನೀಡಲೆಂದು ಪ್ರವಾಸೋದ್ಯಮ ಇಲಾಖೆ ಒಂದು ಕೋಟಿ ಅನುದಾನದಲ್ಲಿ ನಿರ್ಮಿಸಿದ “ಸಿಗಂದೂರು ಯಾತ್ರಿ ನಿವಾಸ” ಲೋಕಾರ್ಪಣೆ ಆಗದೆ ಪಾಳು ಬಿದ್ದಿದ್ದು ಸಾರ್ವಜನಿಕರ ಬಳಕೆಗೆ ಸಿಗದೆ ಸೊರಗುತ್ತಿದೆ.
ಸಾಗರ ತಾಲ್ಲೂಕು ಕೇಂದ್ರದಿಂದ ಸುಮಾರು 35 ಕಿಲೋ ಅಂತರದಲ್ಲಿರುವ ತುಮರಿ ಸಮೀಪದ ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 2018ರಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಸಿಗಂದೂರು ದೇವಸ್ಥಾನದ ಮುಂಭಾಗದಲ್ಲಿನ ಕಳಸವಳ್ಳಿ ಗ್ರಾಮದ ಸರ್ವೆ ನಂಬರ್ 65 ರಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಟ್ಟಡವನ್ನು ನಿರ್ಮಿತಿ ಕೇಂದ್ರ ನಿರ್ಮಿಸಿದೆ.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತಂಗುವ ಕೊಠಡಿಗಳು, ಸುಸಜ್ಜಿತ ಶೌಚಾಲಯ ರೂಪಿಸಲಾಗಿದೆ, ಸದ್ಯ ಸುಸಜ್ಜಿತ ಕಟ್ಟಡ ತಲೆ ಎತ್ತಿ ನಿಂತಿದ್ದರು ಸಹ ಲೋಕಾರ್ಪಣೆಯಾಗಲು ಅರಣ್ಯ ಇಲಾಖೆ,ವನ್ಯಜೀವಿ ವಲಯ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಕಟ್ಟಡಕ್ಕೆ ಬೀಗ ಮುದ್ರೆ ಬಿದ್ದಿದೆ ಸದ್ಯ ವಿವಾದ ಈಗ ನ್ಯಾಯಾಲಯದಲ್ಲಿದೆ.
ಕಟ್ಟಡ ನಿರ್ಮಾಣವಾಗಿರುವ ಕಳಸವಲ್ಲಿ ಗ್ರಾಮದ ಭೂಮಿಯು ಸೊಪ್ಪಿನ ಬೆಟ್ಟದ ಭೂಮಿಯಾಗಿದ್ದು ಸದರಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿದ್ದ ಎರಡು ಎಕರೆ ಭೂಮಿಯನ್ನು ಶಿವಮೊಗ್ಗ ಜಿಲ್ಲಾಧಿಕಾರಿಗಳು ಭೂ ಮಂಜೂರಾತಿ ಮಾಡಿ ನಂತರ ಮಂಜೂರಾತಿ ರದ್ದು ಮಾಡಿರುವುದು ಹಲವು ಗೊಂದಲಗಳಿಗೆ ಪ್ರಮುಖ ಕಾರಣವಾಗಿದೆ. ಇದರಿಂದ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಸಾರ್ವಜನಿಕರ ಬಳಕೆಗೆ ಸಿಗದೆ ಸೊರಗುತ್ತಿದ್ದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಕಟ್ಟಡ ನಿರ್ಮಾಣದ ಸಮಯದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಇದ್ದ ವನ್ಯಜೀವಿ ಇಲಾಖೆ ಅಧಿಕಾರಿಗಳು ಕಟ್ಟಡ ಪೂರ್ಣಗೊಂಡ ನಂತರ ತಕರಾರು ತೆಗೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಯಾತ್ರಿ ನಿವಾಸ ಜನ ಬಳಕೆಗೆ ಸಿಗದೆ ಇರಲು ಮತ್ತೊಂದು ಕಾರಣವಾಗಿದೆ.
ಒಂದು ಕೋಟಿ ಅನುದಾನ:
ಮಾಜಿ ವಿಧಾನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾದಾಗ ಅವರ ಒತ್ತಾಸೆಯಂತೆ ಯಾತ್ರಿ ನಿವಾಸ ಕಟ್ಟಡಕ್ಕೆ ಅಂದಿನ ಪ್ರವಾಸೋದ್ಯಮ ಸಚಿವ ಆರ್ ವಿ ದೇಶಪಾಂಡೆ ಸಿಗಂದೂರು ದೇವಸ್ಥಾನಕ್ಕೆ ಭೇಟಿ ನೀಡಿ ಯಾತ್ರಿ ನಿವಾಸ ಘೋಷಣೆ ಮಾಡಿ ಒಂದು ಕೋಟಿ ರೂಗಳ ಅನುದಾನ ನೀಡಿದ್ದರು. ಕಾಗೋಡು ತಿಮ್ಮಪ್ಪನವರ ಸೂಚನೆ ಮೇಲೆ ಜಿಲ್ಲಾಧಿಕಾರಿ ಭೂ ಮಂಜೂರಾತಿ ಸಹ ಮಾಡಿದ್ದರು. ಆದರೆ ಆ ವೇಳೆ ಸ್ಥಳ ಪರಿಶೀಲನೆ ನಡೆಸಿಲ್ಲವೇ ಆ ಸಮಯದಲ್ಲಿ ವನ್ಯಜೀವಿ ಅಧಿಕಾರಿಗಳು ಯಾಕೆ ತಕರಾರು ಸಲ್ಲಿಸಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಸದ್ಯಕ್ಕೆ ಇರುವ ಪರಿಹಾರವೇನು:
ವನ್ಯಜೀವಿ ವಲಯದಿಂದ ಪ್ರಕರಣ ದಾಖಲಾಗಿರುವ ಕಾರಣ ಸರ್ಕಾರಿ ಅನುದಾನ ನಷ್ಟ ವಾಗುತ್ತಿರುವುದು ಸತ್ಯವಾಗಿದ್ದು. ಮೇಲ್ಮನವಿ ಸಲ್ಲಿಸುವ ಅವಕಾಶದ ಜೊತೆಗೆ ಅರಣ್ಯ ಹಕ್ಕು ‘ನಮೂನೆ ಬಿ’ ಯಲ್ಲಿ ಸಮುದಾಯದ ಹಕ್ಕಿನ ಅಡಿಯಲ್ಲಿ ಭೂಮಿ ಮಂಜೂರಾತಿಗೆ ಅವಕಾಶವಿದೆ ಅಥವಾ ಈಗಿರುವ ಭೂಮಿಗೆ ಪರ್ಯಾಯ ಭೂಮಿಯನ್ನು ಬೇರೆ ಭಾಗದಲ್ಲಿ ನೀಡಿ ಯಾತ್ರಿ ನಿವಾಸ ಉಳಿಸಿಕೊಳ್ಳುವ ಅವಕಾಶವೂ ಇದೆ ಆದರೆ ಈ ಬಗ್ಗೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಸರ್ಕಾರದ ಇಚ್ಚಾಶಕ್ತಿ ಕೊರತೆ ಸಹ ಎದ್ದು ಕಾಣುತ್ತಿದೆ. ಸದ್ಯ ಸರ್ಕಾರದ ದೃಢವಾದ ನಿಲುವಿನ ಮೇಲೆ ಸಿಗಂದೂರು ಯಾತ್ರಿ ನಿವಾಸದ ಭವಿಷ್ಯ ಉಳಿದುಕೊಳ್ಳಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಸಿಗಂದೂರು ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಸರ್ಕಾರಿ ರಜಾ ದಿನಗಳಲ್ಲಿ ಇದು ದ್ವಿಗುಣ ಗೊಳ್ಳುತ್ತದೆ ಆದರೆ ಬರುವ ಭಕ್ತಾದಿಗಳಿಗೆ ಯಾತ್ರಿ ನಿವಾಸ ಲಭ್ಯತೆ ಇಲ್ಲದಿರುವ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಟ್ಟಡವು ಗುಡ್ಡದ ಮೇಲ್ಬಾಗದಲ್ಲಿ ಇರುವುದರಿಂದ ಸುತ್ತ ಮುತ್ತ ಪಾಳು ಬಿದ್ದು ಗಿಡಗಂಟಿಗಳು ಬೆಳೆಯುತ್ತಿದ್ದು ಅನೈತಿಕ ಚಟುವಟಿಕೆಗಳ ತಾಣವಾಗುವ ಆತಂಕ ಸಹ ಎದುರಾಗಿದೆ. ಅಲ್ಲದೆ ಇಲಾಖೆಯು ಕಟ್ಟಡ ನಿರ್ವಹಣೆಯ ಹೊಣೆಯನ್ನು ಇನ್ನೂ ಸಹ ತಿರ್ಮಾನಿಸಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರು ಸರ್ಕಾರದ ಗಮನ ಸೆಳೆದು ನಿವಾಸವನ್ನು ಸಾರ್ವಜನಿಕರ ಬಳಕೆಗೆ ನೀಡಲು ಭಕ್ತರ ಆಗ್ರಹಿಸಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿ ಇದೆ. ಜಿಲ್ಲಾಧಿಕಾರಿಗಳು ಈ ಹಿಂದಿನ ಭೂ ಮಂಜೂರಾತಿ ರದ್ದು ಆದ ಕಾರಣ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಭೂ ಮಂಜೂರಾತಿ ಸಾಧ್ಯತೆ ಬಗ್ಗೆ ಪ್ರಯತ್ನ ನಡೆಸುತ್ತೇವೆ.
ನಿರ್ಮಾಣ ಕಾರ್ಯ ಹಲವು ವಸಂತಗಳೂ ಉರುಳಿದರೂ ಸಾರ್ವಜನಿಕರ ಉಪಯೋಗಕ್ಕೆ ಸಿಗದೇ ಇರುವುದರಿಂದ ಸಾಕಷ್ಟು ಅನಾನುಕೂಲ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರೊಂದಿಗೆ ಚರ್ಚಿಸಿ ಶೀಘ್ರವೇ ಸಾರ್ವಜನಿಕರಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು. ಯಾತ್ರಿ ನಿವಾಸ ನಿರ್ವಹಣೆಗೆ ಬಗ್ಗೆ ಪ್ರವಾಸೋದ್ಯಮ ಇಲಾಖೆಯಿಂದ ಗ್ರಾಮ ಪಂಚಾಯ್ತಿಗೆ ಇದುವರೆಗೆ ಯಾವುದೇ ನಿರ್ದೇಶನ ಬಂದಿಲ್ಲ.